ಕೊಡಗು ನಿರಾಶ್ರಿತರ ಪುನರ್‌ವಸತಿಗೆ ಒಂದು ದಿನದ ವೇತನ ನೀಡಲಿರುವ ಪ್ರಾಥಮಿಕ ಶಾಲಾ ಶಿಕ್ಷಕರು

ಬೆಂಗಳೂರು, ಆ.19: ಜಲ ಪ್ರವಾಹಕ್ಕೆ ಸಿಲುಕಿ ಸಂತ್ರಸ್ತಗೊಂಡಿರುವ ಕೊಡಗು ನಿರಾಶ್ರಿತರ ಪುನರ್ ವಸತಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒದಗಿಸಲು ತೀರ್ಮಾನಿಸಿವೆ.
ಕರ್ನಾಟಕ ರಮ್ಯ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಗು ಜಿಲ್ಲೆ ಕಂಡರಿಯದ ಜಲಪ್ರಳಯಕ್ಕೆ ತುತ್ತಾಗಿದ್ದು, ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ. ಕೊಡಗು ಜಿಲ್ಲೆಯ ಸಾವಿರಾರು ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ್ದಾರೆ. ಈಗ ಅವರ ಜನ್ಮ ಸ್ಥಳ ಕೊಡಗಿನಲ್ಲಿ ಜಳಪ್ರಳಯದಿಂದಾಗಿ ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಸಹಾಯಕ್ಕೆ ಧಾವಿಸುವುದು ನಮ್ಮ ಕರ್ತವ್ಯವಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು ರಾಜ್ಯದಲ್ಲಿ ಸಂಕಷ್ಟ ಎದುರಾದಾಗಲೆಲ್ಲ ನೆರವಿಗೆ ಧಾವಿಸಿದ್ದಾರೆ. ಅದೇ ಮಾದರಿಯಲ್ಲಿ ಮಳೆಯಿಂದಾಗಿ ನಿರಾಶ್ರಿತಗೊಂಡಿರುವ ಜನತೆಗೆ ಆರ್ಥಿಕ ನೆರವು ನೀಡಲು ಒಂದು ದಿನದ ವೇತನವನ್ನು ನೀಡಲು ಮುಂದೆ ಬಂದಿದ್ದೇವೆ ಎಂದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





