ಕೊಡಗು ಜಿಲ್ಲೆಯ ಜನರ ಪುನರ್ವಸತಿಗೆ ಧನ ಸಹಾಯ ಮಾಡಿ: ರಾಜ್ಯದ ಜನರಲ್ಲಿ ಮನವಿ ಮಾಡಿದ ಸಿಎಂ ಕುಮಾರಸ್ವಾಮಿ

ಮೈಸೂರು,ಆ.19: ಭಾರೀ ಮಳೆಗೆ ಕೊಡಗು ಜಿಲ್ಲೆಯ ಜನ ತತ್ತರಿಸಿದ್ದು, ಅವರ ಪುನರ್ವಸತಿಗೆ ಧನ ಸಹಾಯ ಮಾಡುವಂತೆ ರಾಜ್ಯ ಜನರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆಗೆ ತೆರಳುವ ಮುನ್ನ ಲಲಿತ್‍ಮಹಲ್ ಹೆಲಿಪ್ಯಾಡ್‍ನಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ನಾನು ಮಾಡಿದ ಮನವಿಗೆ ರಾಜ್ಯದ ಜನ ಅಭೂತ ಪೂರ್ವ ಬೆಂಬಲ ನೀಡಿ ಆಹಾರ ಪಧಾರ್ಥ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಿದ್ದಾರೆ. ಅವರು ನೀಡಿದ ಆಹಾರ ಪಧಾರ್ಥಗಳನ್ನು ಸಂತ್ರಸ್ತರ ನೆರವಿಗೆ ತಲುಪಿಸಲಾಗುವುದು. ನೀವುಗಳು ನೀಡಿದ ಸಹಕಾರಕ್ಕೆ ನಾನು ಚಿರಋಣಿ ಎಂದು ಹೇಳಿದರು.
ಕೊಡಗು ಜಿಲ್ಲೆಯ ಜನರು ಭಾರಿ ಮಳೆಗೆ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅವರ ಪುನರ್ ವಸತಿ ಕಲ್ಪಿಸಲು ಹಣದ ಅವಶ್ಯಕತೆ ಇದೆ. ಹಾಗಾಗಿ ಅವರಿಗೆ ಸೂರು ಒದಗಿಸುವ ದೃಷ್ಟಿಯಿಂದ ರಾಜ್ಯದ ಜನ ಸಹಾಯ ಮಾಡಬೇಕು ಎಂದು ಕೋರಿದ ಮುಖ್ಯಮಂತ್ರಿಗಳು, ಸಹಾಯ ಮಾಡುವವರು ಡಿ.ಡಿ. ಅಥವಾ ಚೆಕ್ ಮೂಲಕವೇ ಸಂದಾಯ ಮಾಡಿ ಎಂದು ಹೇಳಿದರು.
Next Story





