ನಿರಾಶ್ರಿತರಿಗೆ ಮನೆ: ಬಿಎಸ್‌ವೈ ಭರವಸೆ
ಮಡಿಕೇರಿ, ಆ.19: ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ಮನೆ ಕಳೆದುಕೊಂಡವರಿಗೆ ರಾಜ್ಯ ಸರಕಾರ ಸೂಕ್ತವಾದ ನಿವೇಶನ ಒದಗಿಸಿಕೊಟ್ಟಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಶಾಶ್ವತವಾದ ಮನೆ ನಿರ್ಮಿಸಿಕೊಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸುಂಟಿಕೊಪ್ಪದ ರಾಮಮಂದಿರದಲ್ಲಿ ಸಂಘಪರಿವಾರ ಹಾಗೂ ಸ್ಥಳೀಯರ ನೆರವಿನಿಂದ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಯಿಂದ ಗ್ರಾಮ ಗ್ರಾಮಗಳೇ ನಿರ್ನಾಮವಾಗಿದ್ದು, ಅಲ್ಲಿದ್ದ ನಿವಾಸಿಗಳು ಉಟ್ಟಬಟ್ಟೆಯಲ್ಲೇ ಗ್ರಾಮ ತೊರೆದು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರುಗಳಿಗೆ ಪ್ರಸಕ್ತ ಊಟ-ಬಟ್ಟೆಗೆ ದಾನಿಗಳು ನೆರವು ನೀಡುತ್ತಿದ್ದರೂ, ಶಾಶ್ವತವಾದ ಮನೆ ನಿರ್ಮಿಸಿಕೊಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸುರಕ್ಷಿತವಾದ ನಿವೇಶನಗಳನ್ನು ಗುರುತಿಸಿಕೊಟ್ಟಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶಾಶ್ವತವಾದ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ನುಡಿದರು.
ನಿರಾಶ್ರಿತರ ಕೇಂದ್ರಗಳಿಗೆ ಇನ್ನೂ ಜಿಲ್ಲಾಡಳಿತದ ವತಿಯಿಂದ ಯಾವುದೇ ನೆರವು ದೊರಕದಿರುವ ಬಗ್ಗೆ ಸಂತ್ರಸ್ತರು ಗಮನಸೆಳೆದ ಸಂದರ್ಭ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ನೆರವು ಕಲ್ಪಿಸಲು ಸೂಚಿಸಲಾಗುವುದು. ತಾತ್ಕಾಲಿಕ ಶೌಚಾಲಯ ಮತ್ತಿತರ ವ್ಯವಸ್ಥೆ ಮಾಡಲು ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಯಡಿಯೂರಪ್ಪ ಅವರೊಂದಿಗೆ ಸಂಸದರಾದ ಪ್ರತಾಪ್‌ಸಿಂಹ, ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಸ್ಥಳೀಯ ಪ್ರಮುಖರಾದ ಪಟ್ಟೆಮನೆ ಶೇಷಪ್ಪ, ಎಂ.ಎ.ವಸಂತ, ಡಾ. ಶಶಿಕಾಂತ ರೈ ಮತ್ತಿತರರಿದ್ದರು.
ಇದೇ ಸಂದರ್ಭ ಯಡಿಯೂರಪ್ಪ ಹಾಗೂ ಇತರರು ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಖತೀಜ ಉಮ್ಮ ಕಲ್ಯಾಣ ಮಂಟಪದಲ್ಲಿ ಅಶ್ರಯ ಪಡೆದಿರುವ ನಿರಾಶ್ರಿತರನ್ನು ಭೇಟಿ ಮಾಡಿ ಮಾಹಿತಿ ಪಡೆದರು.