ಉಚ್ಚಂಗಿದುರ್ಗ : ನೇಣು ಬಿಗಿದು ಪ್ರೇಮಿಗಳ ಆತ್ಮಹತ್ಯೆ
ಉಚ್ಚಂಗಿದುರ್ಗ, ಆ.19: ಇಲ್ಲಿಗೆ ಸಮೀಪದ ಕಂಚಿಕೇರಿ ಗ್ರಾಮದ ಬಳಿಯ ಜಮೀನಿನೊಂದರಲ್ಲಿ ನೇಣು ಬಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಶಶಿಕುಮಾರ(23), ಕಾವ್ಯ(16) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಕಂಚಿಕೇರಿ ಗ್ರಾಮದ ವಾಸಿಯಾದ ಈ ಇಬ್ಬರು ಕಳೆದ ಆ.17ರಂದು ರಾತ್ರಿ ಊರು ಬಿಟ್ಟು ಹೋಗಿದ್ದಾರೆ.
ಇಬ್ಬರ ಮನೆಯವರು ತಮ್ಮ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಿಗೆ ಆ.18 ರಂದು ಹುಡುಕಾಡಿದ್ದಾರೆ. ಆದರೆ ಆ.19ರಂದು ಬೆಳಗ್ಗೆ ಹುಡುಗನ ಜಮೀನಿನಲ್ಲಿ ಇಬ್ಬರೂ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ಮೃತ ಕಾವ್ಯ ಎಸೆಸೆಲ್ಸಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ.
ಒಂದೇ ಜನಾಂಗದ ಈ ಇಬ್ಬರು ಸಂಬಂಧದಲ್ಲಿ ಮಾವ, ಸೊಸೆ ಆಗಬೇಕಾಗಿದ್ದು, ಇಬ್ಬರು ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹುಡುಗ ಶಶಿಕುಮಾರನಿಗೆ ಅವರ ಮನೆಯವರು ಇನ್ನೊಬ್ಬ ಮಾವನ ಮಗಳನ್ನು ಮದುವೆ ಮಾಡಲು ಯೋಚಿಸಿದ್ದರು ಎನ್ನಲಾಗಿದೆ. ಇವರ ಪ್ರೀತಿ ವಿಷಯ ಮನೆಯವರಿಗೆ ಗೊತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಮೃತ ಹುಡುಗನ ತಂದೆ ಪರಸಪ್ಪದೂರು ನೀಡಿದ್ದು, ಸಿಪಿಐ ದುರುಗಪ್ಪಹಾಗೂ ಪಿಎಸ್ಸೈ ಪ್ರಸಾದ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಹರಪನಹಳ್ಳಿಯ ತಾಲೂಕಿನ ಅರಸಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







