ಹನೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಬೈಕ್
ಹನೂರು,ಆ.20: ಅನುಮಾನಾಸ್ಪದವಾಗಿ ಬೈಕೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪಟ್ಟಣದ ಆಂಜನೇಯ ಗುಡಿಬೀದಿ ಸಮೀಪ ಖಾಸಗಿ ಜಮೀನೊಂದರಲ್ಲಿ ಪತ್ತೆಯಾಗಿದೆ.
ಪಟ್ಟಣದ ಆಂಜನೇಯ ಗುಡಿಬೀದಿ ಸಮೀಪದ ಜಮೀನಿನ ಗೊಬ್ಬರದಗುಂಡಿ ಬಳಿ ಸೋಮವಾರ ಬೆಳಿಗ್ಗೆ ದ್ವಿಚಕ್ರ ವಾಹನವೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಹನೂರು ಸಬ್‍ಇನ್ಸ್ ಪೆಕ್ಟರ್ ನಾಗೇಶ್ ಮತ್ತು ಸಿಬ್ಬಂದಿ ತಂಡ ಪರಿಶೀಲನೆ ನಡೆಸಿದ್ದು, ಬೈಕ್ ನಂಬರ್ ಪ್ಲೇಟನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಸಬ್‍ಇನ್ಸ್ ಪೆಕ್ಟರ್ ನಾಗೇಶ್, ಮೇಲ್ನೋಟಕ್ಕೆ ಈ ಬೈಕು ಹನೂರು ನಿವಾಸಿಗಳಿಗೆ ಸೇರಿದ್ದಲ್ಲ. ವಾಹನದ ನಂಬರ್ ಮತ್ತು ಮಾಲಿಕರ ಪತ್ತೆಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ವಾಹನದ ಸಂಖ್ಯೆಯನ್ನು ನೀಡಲಾಗಿದೆ. ಮಾಹಿತಿ ದೊರೆತ ಕೂಡಲೇ ಮುಂದಿನ ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಸುಟ್ಟ ಬೈಕನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.