ಜನಪ್ರತಿನಿಧಿಗಳು, ಅಧಿಕಾರಿಗಳ ಮಕ್ಕಳು ಕಡ್ಡಾಯ ಸರಕಾರಿ ಶಾಲೆಗೆ: ಕಾನೂನು ಜಾರಿಗೆ ಚಿಂತನೆ
ಸಾಂದರ್ಭಿಕ ಚತ್ರ
ಬೆಂಗಳೂರು, ಆ.21: ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲಾ ಸರಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗೆ ಕಳುಹಿಸಬೇಕೆಂಬ ಹೊಸ ಕಾನೂನನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಕಾನೂನು ಜಾರಿಗೆ ತರುವ ಕುರಿತಂತೆ ರಾಜ್ಯ ಸರಕಾರ ಎಲ್ಲಾ ರೀತಿಯಲ್ಲಿಯೂ ಪರಿಶೀಲನೆಗಳನ್ನು ನಡೆಸುತ್ತಿದ್ದು, ಇತರೆ ರಾಜ್ಯಗಳ ನ್ಯಾಯಾಲಯದ ಆದೇಶಗಳನ್ನು ಪರಿಶೀಲನೆ ನಡೆಸುತ್ತಿದೆ. ಇದಲ್ಲದೆ ಸೋಮವಾರ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕಾನೂನು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡರೊಂದಿಗೂ ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಹಾಜರಿದ್ದ ಕೆಲವರು ಮಾಹಿತಿ ನೀಡಿದ್ದು, ಕಾನೂನು ರೂಪಿಸುವುದಕ್ಕೂ ಮುನ್ನ ಎಲ್ಲಾ ರೀತಿಯ ಕಾನೂನು ಮತ್ತು ಆದೇಶಗಳ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ. ಇತರೆ ರಾಜ್ಯಗಳ, ನ್ಯಾಯಾಲಯದ ಆದೇಶಗಳನ್ನು ಪರಿಶೀಲನೆ ನಡೆಸುವುದಕ್ಕೂ ಮುನ್ನ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2017ರ ನವೆಂಬರ್ ತಿಂಗಳಿನಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಎಂಎಲ್ಸಿ ಜಿ.ರಘು ಆಚಾರ್ ಪ್ರಸ್ತಾಪಿಸಿದ್ದ ಖಾಸಗಿ ಕಾನೂನನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ರಘು ಪ್ರಸ್ತಾಪಕ್ಕೆ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈ ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ತನ್ವೀರ್ ಸೇಟ್ ಅವರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದರು.