ಕೇರಳ ಪ್ರವಾಹ ಸಂತ್ರಸ್ತರಿಗೆ ಹಣ ನೀಡಿದ ಬಾಲಕಿಗೆ ಸೈಕಲ್ ನೀಡಿದ ಹೀರೋ ಕಂಪೆನಿ

ವಿಲ್ಲುಪುರಂ, ಆ. 21: ಸೈಕಲ್ ಖರೀದಿಸಲು ಕೂಡಿಟ್ಟ 8,420 ರೂ. ಯನ್ನು ಕೇರಳ ನೆರೆ ಪರಿಹಾರ ನಿಧಿಗೆ ನೀಡಿದ್ದ ವಿಲ್ಲುಪುರಂ 8 ವರ್ಷದ ಬಾಲಕಿ ಅನುಪ್ರಿಯಾಗೆ ಹೀರೋ ಸೈಕಲ್ ಶೋ ರೂಂ ನೀಲಿ ಬಣ್ಣದ ಸೈಕಲ್ ಅನ್ನು ಕೊಡುಗೆಯಾಗಿ ನೀಡಿದೆ. ತಂದೆ ಹಾಗೂ ತಾಯಿಯ ಜೊತೆಗೆ ಅನುಪ್ರಿಯಾ ಈ ಸೈಕಲ್ ಅನ್ನು ಶೋ ರೂಮನ್ ಮಾಲಕರಿಂದ ಸ್ವೀಕರಿಸಿದಳು.
‘‘ಹೀಗೆಲ್ಲ (ಮಾದ್ಯಮ ಪ್ರಚಾರ) ಸಂಭವಿಸುತ್ತದೆ ಎಂದು ನಾನು ನಿರೀಕ್ಷಿಸರಿಲಿಲ್ಲ. ಈಗ ನಾನು ರೋಮಾಂಚಿತಳಾಗಿದ್ದೇನೆ. ನೆರೆಯ ನೀರಲ್ಲಿ ಹಲವು ಮಕ್ಕಳು ತೊಂದರೆಗೀಡಾಗಿರುವುದನ್ನು ನಾನು ಟಿವಿಯಲ್ಲಿ ನೋಡಿದೆ. ಸೈಕಲ್ ಖರೀದಿಸಲು ಕೂಡಿಟ್ಟ ಹಣವನ್ನು ಕೇರಳದ ನೆರೆ ಪರಿಹಾರ ನಿಧಿಗೆ ನೀಡಲು ಬಯಸಿರುವುದಾಗಿ ಅಪ್ಪನಿಗೆ ತಿಳಿಸಿದೆ. ಅಪ್ಪ ಒಪ್ಪಿಕೊಂಡರು’’ ಎಂದು ಅನುಪ್ರಿಯಾ ತಿಳಿಸಿದ್ದಾಳೆ.
ಎಲ್‌ಕೆಜಿಯಲ್ಲಿರುವಾಗ ಸೈಕಲ್ ಬೇಕು ಎಂದು ಅನುಪ್ರಿಯ ತಂದೆಯಲ್ಲಿ ಕೇಳಿದ್ದಳು. ಆದರೆ, ಅನುಪ್ರಿಯ ಚಿಕ್ಕವಳಾದುದರಿಂದ ಸೈಕಲ್ ತೆಗೆದುಕೊಡಲು ತಂದೆ ಒಪ್ಪಿಕೊಳ್ಳಲಿಲ್ಲ. ಆದರೆ, ಸೈಕಲ್ ತೆಗೆಯಲು ಅನುಪ್ರಿಯಳೇ ಹಣ ಸಂಗ್ರಹಿಸಲು ಆರಂಭಿಸಿದಳು. ಅನುಪ್ರಿಯಾಳದ ತಂದೆ ಶಿವ ಷಣ್ಮುಗನಾಥನ್ ಟಿಎನ್‌ಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರಿಕ್ಷೆಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ. ತಾಯಿ ಲಲಿತಾ ಅದೇ ಕೋಚಿಂಗ್ ಸೆಂಟರ್‌ನಲ್ಲಿ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಕೂಡಿಟ್ಟ ಹಣವನ್ನು ಲೆಕ್ಕ ಮಾಡಲು ಮಗಳಿಗೆ ತಾಯಿ ಸಹಕರಿಸಿದರು ಹಾಗೂ ಅದನ್ನು ಪ್ಯಾಕ್ ಮಾಡಿ ಕೇರಳ ಮುಖ್ಯಮಂತ್ರಿ ನಿಧಿ ಪರಿಹಾರ ನಿಧಿಗೆ ಕಳುಹಿಸಿಕೊಟ್ಟರು.







