ನೆರೆ ಸಂತ್ರಸ್ಥರ ಸಹಾಯಕ್ಕೆ ಕಮ್ಯುನಿಸ್ಟ್ ಪಕ್ಷ ಮನವಿ
ಉಡುಪಿ, ಆ.21: ಕರ್ನಾಟಕದ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ಸುರಿದ ವರ್ಷಧಾರೆಗೆ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಮಂದಿ ತಮ್ಮದೆಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ಎಲ್ಲಾ ನಮ್ಮ ಬಂಧುಗಳಿಗೆ ನಾವು ಮನುಷ್ಯತ್ವವನ್ನು ತೋರಬೇಕಾಗಿದೆ. ಅವರು ತಮ್ಮ ಬದುಕುಗಳನ್ನು ಕಟ್ಟಿಕೊಡಲು ನಾವು ಹೃದಯವೈಶಾಲ್ಯತೆಯೊಂದಿಗೆ ನಮ್ಮ ಜವಾಬ್ಧಾರಿಯನ್ನು ನಿರ್ವಹಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಆದುದರಿಂದ ಪಕ್ಷದ ಸದಸ್ಯರು, ಕಾರ್ಯಕರ್ತರು, ಬೆಂಬಲಿಗರು ಕೂಡಲೇ ತಮ್ಮಿಂದಾಗುವಷ್ಟು ಧನಸಹಾಯ ಮಾಡಬೇಕು.ಮಂಗಳೂರಿನಲ್ಲಿ ರೂಪಾವಾಣಿ ಸಿನಿಮಾ ಮಂದಿರದ ಎದುರು ಕೇಂದ್ರ ತರಕಾರಿ ಮಾರುಕಟ್ಟೆಯ ಮೊದಲನೆಯ ಮಹಡಿಯಲ್ಲಿರುವ ಎಐಟಿಯುಸಿ ಕಚೇರಿ, ಬಂಟ್ವಾಳ ಬಿಸಿರೋಡಿನ ಜೋಡುಮಾರ್ಗ ಅಂಚೆ ಕಚೇರಿಯೆದುರು ಇರುವ ಸಿಪಿಐ ಕಛೇರಿ ಹಾಗೂ ಉಡುಪಿಯಲ್ಲಿ ಚಿತ್ತರಂಜನ್ ವೃತ್ತದ ಬಳಿ ಇರುವ ನ್ಯೂ ವ್ಯವಹಾರ್ ಕಾಂಪ್ಲೆಕ್ಷ್ ನ ಎರಡನೆ ಮಹಡಿಯಲ್ಲಿರುವ ಸಿಪಿಐ ಕಚೇರಿಗೆ ಕೂಡಲೇ ಮುಟ್ಟಿಸಬೇಕೆಂದು ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಕರೆನೀಡಿದ್ದಾರೆ.
ಜಿಲ್ಲಾ ಸಮಿತಿ ಸದಸ್ಯರು ಹಾಗೂ ಪೂರ್ಣಾವಧಿ ಕಾರ್ಯಕರ್ತರಿಂದ ಈಗಾಗಲೇ ಸಂಗ್ರಹಿಸಿದ 25,300ರೂ.ಗಳ ಮೊದಲ ಕಂತನ್ನು ಪಕ್ಷದ ರಾಜ್ಯ ಸಮಿತಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಲಾಗಿದೆ. ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರಿಂದ ಸಂಗ್ರಹಿಸಲ್ಪಡುವ ಮೊತ್ತವನ್ನು ಮುಂದಕ್ಕೆ ಸಂತ್ರಸ್ಥರಿಗೆ ಕಳುಹಿಸಲಾಗುವುದು ಎಂದು ವಿ. ಕುಕ್ಯಾನ್ ತಿಳಿಸಿದ್ದಾರೆ.





