‘ಕೇರಳ ಪ್ರವಾಹ ಸಂತ್ರಸ್ತರಿಗೆ ಆರೆಸ್ಸೆಸ್ ನೆರವು’ ಎಂದು ಮತ್ತೊಮ್ಮೆ ಸುಳ್ಳು ಹೇಳಿದ ಪೋಸ್ಟ್ ಕಾರ್ಡ್
2016ರ ಚಿತ್ರಗಳ ಬಳಕೆ

ಸುಳ್ಳು ಸುದ್ದಿ ಹರಡುವುದರಲ್ಲೇ ಕುಖ್ಯಾತಿ ಗಳಿಸಿರುವ ‘ಪೋಸ್ಟ್ ಕಾರ್ಡ್ ನ್ಯೂಸ್’ ಕೇರಳ ಪ್ರವಾಹ ದುರಂತಕ್ಕೆ ಸಂಬಂಧಿಸಿ ಮತ್ತೊಮ್ಮೆ ಸುಳ್ಳನ್ನು ಹರಡಿದೆ. ಹಳೆಯ ಫೋಟೊಗಳನ್ನು ಶೇರ್ ಮಾಡಿ ಕೇರಳ ನೆರೆ ಸಂತ್ರಸ್ತರ ರಕ್ಷಣೆ ಎಂದು ಹಸಿಹಸಿ ಸುಳ್ಳು ಹೇಳಿದೆ. “ನಿಮ್ಮ ಕಣ್ಣನ್ನು ತೆರೆಯಿರಿ. ಕೇರಳದ 11 ಜಿಲ್ಲೆಗಳಲ್ಲಿ ಸ್ವಯಂ ಸೇವಕರನ್ನು ನೀವು ಕಾಣಬಹುದು” ಎಂದು ಈ ಫೋಟೊಗಳ ಮೇಲೆ ಬರೆಯಲಾಗಿದೆ. ‘ಪೋಸ್ಟ್ ಕಾರ್ಡ್ ಫ್ಯಾನ್ಸ್’ ಎನ್ನುವ ಫೇಜ್ ಒಂದು ಈ ಪೋಸ್ಟ್ ಹಾಕಿದ್ದು, 2400 ಮಂದಿ ಇದನ್ನು ಲೈಕ್ ಮಾಡಿದ್ದು, 1400 ಶೇರ್ ಗಳಾಗಿವೆ.
ಈ ಚಿತ್ರಗಳು ಟ್ವಿಟರ್ ನಲ್ಲೂ ವೈರಲ್ ಆಗಿವೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೇ ಫಾಲೋ ಮಾಡುತ್ತಿರುವ ಕೆಲವರು ಈ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

2016ರ ಚಿತ್ರಗಳು
ಕೊಲ್ಲಂ ದೇವಾಲಯದಲ್ಲಿ 2016ರಲ್ಲಿ ಸಂಭವಿಸಿದ ಅಗ್ನಿ ದುರಂತದ ವೇಳೆ ಆರೆಸ್ಸೆಸ್ ಮತ್ತು ಸೇವಾ ಭಾರತಿ ಕಾರ್ಯಕರ್ತರು ಅಲ್ಲಿಗೆ ತೆರಳಿದ್ದ ಫೋಟೊಗಳನ್ನು ಈಗ ಕೇರಳ ದುರಂತ ಸಂತ್ರಸ್ತರಿಗೆ ಆರೆಸ್ಸೆಸ್ ನೆರವು ಎಂದು ಸುಳ್ಳು ಹೇಳಿ ಹರಡಲಾಗುತ್ತಿದೆ. ಸುಳ್ಳು ಹರಡಿ ಕುಖ್ಯಾತಿ ಗಳಿಸಿದ್ದ ‘ಪೋಸ್ಟ್ ಕಾರ್ಡ್’’ ಪೇಜನ್ನು ಜುಲೈ ತಿಂಗಳಲ್ಲಿ ಫೇಸ್ ಬುಕ್ ತೆಗೆದುಹಾಕಿದೆ. ಇದೀಗ ‘ಪೋಸ್ಟ್ ಕಾರ್ಡ್ ಫ್ಯಾನ್ಸ್’ ಎನ್ನುವ ಪೇಜ್ ಮೂಲಕ ಕಂಟೆಂಟ್ ಗಳನ್ನು ಶೇರ್ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಇನ್ನೊಂದು ಫೋಟೊವನ್ನು ಪೋಸ್ಟ್ ಮಾಡಿರುವ ಈ ಪೇಜ್ “ಕೇರಳ ಸಂತ್ರಸ್ತರಿಗೆ ಆರೆಸ್ಸೆಸ್ ಕಾರ್ಯಕರ್ತರ ನೆರವು” ಎಂದು ಬರೆದಿದೆ. ಆದರೆ ಪೋಸ್ಟ್ ಮಾಡಿರುವ ಚಿತ್ರ 2013ರದ್ದಾಗಿದೆ. ಇಡುಕ್ಕಿ ಭೂಕುಸಿತದ ಸಂದರ್ಭದ ಫೋಟೊ ಇದಾಗಿದೆ.
ಈ ಹಿಂದೆಯೂ ‘ಪೋಸ್ಟ್ ಕಾರ್ಡ್ ನ್ಯೂಸ್’ ಇಂತಹ ಹಸಿಹಸಿ ಸುಳ್ಳುಗಳನ್ನು ಹರಡಿದೆ. 2016ರ ಬಿಹಾರ ಪ್ರವಾಹದ ಸಂದರ್ಭದ ಫೊಟೊಗಳನ್ನು ಕೂಡ ‘ಪೋಸ್ಟ್ ಕಾರ್ಡ್ ನ್ಯೂಸ್’ ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವು ಎಂದು ಬಳಸಿತ್ತು.

ಕೃಪೆ: altnews.in







