ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದ ಕೇಂದ್ರ ಸರಕಾರ
ಕ್ರಿಮಿನಲ್ ಗಳು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಸುಪ್ರೀಂಕೋರ್ಟ್ ಸಲಹೆಗೆ ಅಸಮಾಧಾನ

ಹೊಸದಿಲ್ಲಿ, ಆ.21: ಅಪರಾಧಿ ಹಿನ್ನೆಲೆಯ ವ್ಯಕ್ತಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಸರ್ವೋಚ್ಚ ನ್ಯಾಯಾಲಯದ ಸಲಹೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರಕಾರ, ಘನ ನ್ಯಾಯಾಲಯವು ಸಂವಿಧಾನ ನಿಷೇಧಿಸಿರುವ ಕ್ಷೇತ್ರವನ್ನು ಪ್ರವೇಶಿಸಲು ಅಥವಾ ತನ್ನ ವ್ಯಾಪ್ತಿಗಿಂತ ಹೊರಗಿನ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
ಅಪರಾಧಿ ಹಿನ್ನೆಲೆಯ ವ್ಯಕ್ತಿಗಳನ್ನು ಚುನಾವಣಾ ಕಣಕ್ಕಿಳಿಸುವ ಪಕ್ಷಗಳಿಗೆ ಚಿಹ್ನೆಗಳನ್ನು ನೀಡದೆ ಇರುವ ಅಧಿಕಾರವನ್ನು ನಾವು ಚುನಾವಣಾ ಆಯೋಗಕ್ಕೆ ನೀಡಬಹುದೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಇದರಿಂದ ಅಸಮಾಧಾನಗೊಂಡ ಕೇಂದ್ರ, ಆ ಕೆಲಸ ಮಾಡಬೇಕಿರುವುದು ಚುನಾಯಿತ ಪ್ರತಿನಿಧಿಗಳೇ ಹೊರತು ನ್ಯಾಯಾಲಯ ಅಲ್ಲ ಎಂದು ಪ್ರತಿಕ್ರಿಯಿಸಿದೆ. ಚುನಾವಣಾ ಆಯೋಗವು ಪಕ್ಷಗಳಿಗೆ ಚಿಹ್ನೆಗಳನ್ನು ನೀಡುವ ಆದೇಶದಲ್ಲಿ, ಅಪರಾಧಿಗಳಿಗೆ ಚುನಾವಣಾ ಟಿಕೆಟ್ ನೀಡುವುದಾದರೆ ಅಂಥ ಪಕ್ಷಗಳಿಗೆ ಚಿಹ್ನೆಯನ್ನು ನೀಡುವುದಿಲ್ಲ ಎಂಬ ಒಂದು ವಾಕ್ಯವನ್ನಷ್ಟೇ ಸೇರಿಸಲು ನಾವು ಬಯಸಿದ್ದೇವೆ ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತಿಳಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಟರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, “ಅದನ್ನು ನಿರ್ಧರಿಸುವವರು ಯಾರು?, ಚುನಾಯಿತ ಪ್ರತಿನಿಧಿಗಳೇ ಅಥವಾ ನ್ಯಾಯಾಲಯದಲ್ಲಿ ಕುಳಿತಿರುವ ಐದು ನ್ಯಾಯಾಧೀಶರೇ?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನ್ಯಾಯಾಲಯವು ಸಂವಿಧಾನ ನಿಷೇಧಿಸಿರುವ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಇಂಥ ಕ್ರಮಗಳಿಂದ ಪಕ್ಷದ ಸದಸ್ಯರ ಮೇಲೆ ನಿರ್ಬಂಧ ಹೇರಿದಂತಾಗುತ್ತದೆ ಮತ್ತು ಅದರಿಂದ ಪರಸ್ಪರ ವಿರೋಧ ಪಕ್ಷಗಳ ಸದಸ್ಯರ ಮೇಲೆ ಹೆಚ್ಚೆಚ್ಚು ದೂರುಗಳನ್ನು ದಾಖಲಿಸುವ ಮೂಲಕ ರಾಜಕೀಯ ಪಕ್ಷಗಳ ಹೊಸದೊಂದು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಅಟರ್ನಿ ಜನರಲ್ ತಿಳಿಸಿದ್ದಾರೆ.





