ಭಾರತ ಕಬಡ್ಡಿ ತಂಡಗಳು ಸೆಮಿ ಪೈನಲ್‌ಗೆ

ಜಕಾರ್ತ, ಆ.21: ಭಾರತದ ಪುರುಷ ಹಾಗೂ ಮಹಿಳಾ ಕಬಡ್ಡಿ ತಂಡಗಳು ಏಶ್ಯನ್ ಗೇಮ್ಸ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿವೆ.
ಏಳು ಬಾರಿ ಚಿನ್ನದ ಪದಕ ವಿಜೇತ ಪುರುಷರ ತಂಡ ದಕ್ಷಿಣ ಕೊರಿಯಾ ವಿರುದ್ಧ 23-24 ಅಂತರದ ಆಘಾತಕಾರಿ ಸೋಲಿನಿಂದ ಬೇಗನೇ ಚೇತರಿಸಿಕೊಂಡು ಐದನೇ ಹಾಗೂ ಅಂತಿಮ ಗ್ರೂಪ್ ‘ಎ’ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 49-30 ಅಂತರದಿಂದ ಸೋಲಿಸಿದೆ. ಭಾರತ ತಂಡ ಕೊರಿಯಾ ವಿರುದ್ಧ ಸೋತ ಬಳಿಕ ಬಾಂಗ್ಲಾದೇಶ(50-21) ಹಾಗೂ ಶ್ರೀಲಂಕಾ(44-28)ತಂಡವನ್ನು ಮಣಿಸಿದೆ.
ಎ ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆದ ಭಾರತ ಸೆಮಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ದಕ್ಷಿಣ ಕೊರಿಯಾ ಇನ್ನಷ್ಟೇ ಗ್ರೂಪ್ ಪಂದ್ಯಗಳನ್ನು ಮುಗಿಸಬೇಕಾಗಿರುವ ಕಾರಣ ಗ್ರೂಪ್ ವಿನ್ನರ್ ಯಾರೆಂದು ಗೊತ್ತಾಗಿಲ್ಲ.
ಮತ್ತೊಮ್ಮೆ ಆಕರ್ಷಕ ಪ್ರದರ್ಶನ ನೀಡಿದ ಭಾರತದ ಮಹಿಳಾ ತಂಡ ಮಂಗಳವಾರ ನಡೆದ ಏಶ್ಯನ್ ಗೇಮ್ಸ್‌ನ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯಾ ವಿರುದ್ಧ 54-22 ಅಂತರದಿಂದ ಜಯ ಸಾಧಿಸಿದೆ.
ಗ್ರೂಪ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ‘ಎ’ ಗುಂಪಿನಲ್ಲಿ 8 ಅಂಕ ಗಳಿಸಿ ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆದಿದೆ.
ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾವನ್ನು 38-12 ಅಂಕಗಳಿಂದ ಸೋಲಿಸಿತ್ತು. ಭಾರತ ಈ ಮೊದಲು ಜಪಾನ್(43-12) ಹಾಗೂ ಥಾಯ್ಲೆಂಡ್(33-23) ತಂಡವನ್ನು ಮಣಿಸಿದೆ.







