ಉಡುಪಿಯಲ್ಲಿ ಶ್ರದ್ಧಾ ಭಕ್ತಿಯ ಬಕ್ರೀದ್ ಆಚರಣೆ
ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ

ಉಡುಪಿ, ಆ.22: ಉಡುಪಿ ಜಿಲ್ಲೆಯಾದ್ಯಂತ ಮುಸ್ಲಿಮ್ ಬಾಂಧವರು ಮಸೀದಿಗಳಲ್ಲಿ ವಿಶೇಷ ನಮಾಝ್ ನಿರ್ವಹಿಸುವ ಮೂಲಕ ಈದುಲ್ ಅಝಾ(ಬಕ್ರೀದ್ ಹಬ್ಬ)ವನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನ ರಶೀದ್ ಅಹ್ಮದ್ ನದ್ವಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು. ಬಳಿಕ ಧರ್ಮ ಗುರುಗಳು ಈದ್ ಸಂದೇಶ ನೀಡಿದರು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ಮತ್ತು ಬಾರಕೂರು ಮಲಿಕ್ ದಿನಾರ್ ಜುಮಾ ಮಸೀದಿಯಲ್ಲಿ ಖತೀಬ್ ಮುಹಮ್ಮದ್ ರಫೀಕ್ ಮದನಿ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಮ್ ಬಾಂಧವರು ವಿಶೇಷ ನಮಾಝ್ ನಡೆಸಿದರು.
ಕುಂದಾಪುರ ಜಾಮೀಯ ಮಸೀದಿಯಲ್ಲಿ ಇಮಾಮ್ ಮುಫ್ತಿ ಸಮಿವು ರ್ರಹ್ಮಾನ್ ಮತ್ತು ಕಾರ್ಕಳ ಜಾಮೀಯ ಮಸೀದಿಯಲ್ಲಿ ಮೌಲಾನ ಝಹೀರ್ ಅಹ್ಮದ್ ಅಲ್‌ಖಾಸಿಮಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಅದೇ ರೀತಿ ಮಲ್ಪೆ, ಆದಿಉಡುಪಿ, ಮಲ್ಪೆ, ನಾಯರ್‌ಕೆರೆ, ಕಟಪಾಡಿ, ಕಾಪು, ಪಡುಬಿದ್ರೆ, ಶಿರ್ವ, ನಾವುಂದ, ಗಂಗೊಳ್ಳಿ, ಶಿರೂರು ಜುಮಾ ಮಸೀದಿಗಳಲ್ಲಿಯೂ ಹಬ್ಬದ ವಿಶೇಷ ಪ್ರಾರ್ಥನೆ ನಡೆಸ ಲಾಯಿತು.
ಬಳಿಕ ಮುಸ್ಲಿಮ್ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಹಲವು ಮಸೀದಿಗಳಲ್ಲಿ ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿನ ನೆರೆ ಸಂತ್ರಸ್ತ ರಿಗಾಗಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಮಸೀದಿಗಳು ಹಾಗೂ ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆಯನ್ನು ಒದಗಿ ಸಲಾಗಿತ್ತು.







