ಮುಂಬೈನ ಹಿರಿಯ ಕಾಂಗ್ರೆಸ್ ಮುಖಂಡ ಗುರುದಾಸ್ ಕಾಮತ್ ನಿಧನ

ಹೊಸದಿಲ್ಲಿ, ಆ.22: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಗುರುದಾಸ್ ಕಾಮತ್ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಮತ್‌ಗೆ 63 ವರ್ಷ ವಯಸ್ಸಾಗಿತ್ತು.
ಮುಂಬೈನಲ್ಲಿರುವ ಕಾಮತ್ ಹೊಸದಿಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ. ಕಾಮತ್ ಕುಟುಂಬಸ್ಥರು ಮುಂಬೈನಿಂದ ದಿಲ್ಲಿಗೆ ಧಾವಿಸಿದ್ದು ಮಧ್ಯಾಹ್ನ ವೇಳೆಗೆ ಮೃತದೇಹವನ್ನು ಮುಂಬೈಗೆ ತರಲಾಗುತ್ತದೆ.
ಕಾಮತ್ ಅವರು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್‌ರನ್ನು ಭೇಟಿಯಾಗಲು ದಿಲ್ಲಿಗೆ ತೆರಳಿದ್ದರು. ಈದ್ ಹಿನ್ನೆಲೆಯಲ್ಲಿ ಬುಧವಾರ ಮುಂಬೈಗೆ ವಾಪಸಾಗಬೇಕಾಗಿತ್ತು.
ವೃತ್ತಿಯಲ್ಲಿ ವಕೀಲರಾಗಿದ್ದ ಕಾಮತ್ 1972ರಲ್ಲಿ ವಿದ್ಯಾರ್ಥಿಜೀವನದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಪೊದಾರ್ ಕಾಲೇಜಿನಲ್ಲಿ ಎನ್‌ಎಸ್‌ಯುಐ ಅನ್ನು ಸೇರ್ಪಡೆಯಾಗಿದ್ದರು. 1976ರಲ್ಲಿ ಮುಂಬೈ ಎನ್‌ಎಸ್‌ಯುಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮುಂಬೈ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2009ರಲ್ಲಿ ವಾಯುವ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದಲೂ, 1984, 1991,1998 ಹಾಗೂ 2004ರಲ್ಲಿ ಈಶಾನ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಗೃಹ ವ್ಯವಹಾರ ಹಾಗೂ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ಕಾಮತ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದರು.







