ಜಮ್ಮು ಕಾಶ್ಮೀರ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ನೇಮಕ

ಹೊಸದಿಲ್ಲಿ, ಆ.22: ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಹಾಲಿ ಗವರ್ನರ್ ಆಗಿ ಸುಧೀರ್ಘ ಕಾಲದಿಂದ ಕಾರ್ಯರ್ವಹಿಸುತ್ತಿದ್ದ ವಿ.ವಿ.ವೋರಾ ಅವರ ಸ್ಥಾನಕ್ಕೆ ಮಲಿಕ್ ನೇಮಕಗೊಂಡಿದ್ದಾರೆ. ಸಮಾಜವಾದ ಹಿನ್ನೆಲೆಯೊಂದಿಗೆ ರಾಜಕೀಯ ಜೀವನ ಆರಂಭಿಸಿದ ಮಲಿಕ್ ಅವರ ನೇಮಕದೊಂದಿಗೆ ರಾಜ್ಯದಲ್ಲಿ ರಾಜಕೀಯ ನೇಮಕಕ್ಕೆ ಕೇಂದ್ರ ಸರ್ಕಾರ ಮರುಚಾಲನೆ ನೀಡಿದೆ. ಸರ್ಕಾರದ ಈ ನಡೆಯೊಂದಿಗೆ ಗಲಭೆಪೀಡಿತ ರಾಜ್ಯದಲ್ಲಿ ರಾಜಕೀಯ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಗಮನ ಹರಿಸುವ ಸುಳಿವು ಸಿಕ್ಕಿದೆ.
ದಿವಂಗತ ಅಟಲ್‍ಬಿಹಾರಿ ವಾಜಪೇಯಿ ಅವರ ಸಹಚರರಾಗಿದ್ದ ಉತ್ತರ ಪ್ರದೇಶ ಮೂಲದ ಲಾಲ್‍ಜಿ ಟಂಡನ್ ಅವರನ್ನು ಬಿಹಾರ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಆಗ್ರಾದ ಮಾಜಿ ಮೇಯರ್ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಹಾಗೂ ಹಿಂದುಳಿದ ವರ್ಗಗಳ ನಾಯಕಿ ಬೇಬಿರಾಣಿ ಮೌರ್ಯ ಅವರನ್ನು ಜಾರ್ಖಂಡ್ ರಾಜ್ಯಪಾಲರಾಗಿ ನೇಮಿಸಲಾಗಿದೆ. ಖ್ಯಾತ ದಲಿತ ಮುಖಂಡ ನಳಂದ ಮೂಲದ ಏಳು ಬಾರಿಯ ಶಾಸಕ ಸತ್ಯದೇವ್ ನಾರಾಯಣ ಆರ್ಯ ಹರ್ಯಾಣ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ರಾಜಭವನ ಹುದ್ದೆಗಳ ಪುನರ್ರಚನೆಯಲ್ಲಿ ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಅವರನ್ನು ಮೇಘಾಲಯಕ್ಕೆ ವರ್ಗಾಯಿಸಲಾಗಿದೆ. ಅವರ ಹುದ್ದೆಗೆ ಹರ್ಯಾಣ ರಾಜ್ಯಪಾಲ ಕಪ್ತನ್ ಸಿಂಗ್ ಸೋಳಂಕಿ ನೇಮಕಗೊಂಡಿದ್ದಾರೆ. ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್ ಅವರನ್ನು ಸಿಕ್ಕಿಂಗೆ ವರ್ಗಾಯಿಸಲಾಗಿದೆ. ಹೊಸ ರಾಜ್ಯಪಾಲರ ನೇಮಕದೊಂದಿಗೆ ಕೇಂದ್ರ ಸರ್ಕಾರ ಪಕ್ಷನಿಷ್ಠರಿಗೆ ಮಣೆ ಹಾಕಿದೆ ಹಾಗೂ ಸಾರ್ವಜನಿಕ ಜೀವನದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದವರನ್ನೇ ಆಯ್ಕೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಹುದ್ದೆಗೆ ರಾಜಕೀಯ ವ್ಯಕ್ತಿಯನ್ನು ನೇಮಕ ಮಾಡುವ ಮೂಲಕ, ರಾಜ್ಯಕ್ಕೆ ಸಾಮಾನ್ಯವಾಗಿ ಸೇನಾ ಅಥವಾ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಇಲ್ಲವೇ ಮಾಜಿ ಉನ್ನತಾಧಿಕಾರಿಗಳನ್ನು ನೇಮಕ ಮಾಡುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದೆ.





