ಭಾರತ-ಪಾಕ್ ಕ್ರಿಕೆಟ್ ಸಂಬಂಧ ಪುನರಾರಂಭಕ್ಕೆ ಸಿಧು ಸಲಹೆ

ಚಂಡೀಗಡ, ಆ.22: ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಂಬಂಧ ಪುನರಾರಂಭಕ್ಕೆ ಸಲಹೆ ನೀಡಿರುವ ಮಾಜಿ ಭಾರತೀಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಗೂ ಪಾಕಿಸ್ತಾನ ಪ್ರೀಮಿಯರ್ ಲೀಗ್ (ಪಿಎಸ್‌ಎಲ್) ನಡುವೆ ಸರಣಿ ಏರ್ಪಡಿಸುವಂತೆ ಐಡಿಯಾ ನೀಡಿದ್ದಾರೆ.
ಐಪಿಎಲ್ ಹಾಗೂ ಪಿಎಸ್‌ಎಲ್ ಟ್ವೆಂಟಿ-20 ಟೂರ್ನಿ ವಿಜೇತ ತಂಡಗಳ ನಡುವೆ ಮೂರು ಪಂದ್ಯಗಳ ಸರಣಿಯನ್ನು ಆಯೋಜಿಸಬೇಕು ಎಂದು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಸೆನಟ್ ಸದಸ್ಯ ಫೈಸಲ್ ಜಾವೇದ್‌ರೊಂದಿಗೆ ನಡೆಸಿದ ಮಾತುಕತೆ ವೇಳೆ ಸಿಧು ಸಲಹೆ ನೀಡಿದ್ದಾರೆ.
‘‘ಕ್ರಿಕೆಟ್ ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯುತ್ತದೆ’’ ಎಂದು ರಾಜಕಾರಿಣಿಯಾಗಿ ಪರಿವರ್ತಿತ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪ್ರಧಾನಮಂತ್ರಿಯಾಗಿ ಪ್ರಮಾನವಚನ ಸ್ವೀಕರಿಸಿದ ಸಮಾರಂಭಕ್ಕೆ ಸಾಕ್ಷಿಯಾಗಲು ಇಸ್ಲಾಮಾಬಾದ್‌ಗೆ ತೆರಳಿದ್ದ ವೇಳೆ ಸಿಧು ಹೇಳಿದ್ದಾರೆ.
ಪಿಎಸ್‌ಎಲ್ ಚಾಂಪಿಯನ್ ಇಸ್ಲಾಬಾಬಾದ್ ಯುನೈಟೆಡ್ ತಂಡದ ಕೋಚ್ ಡಿಯನ್ ಜೋನ್ಸ್ ಅವರು ಸಿಧು ಅವರ ಸಲಹೆಯನ್ನು ಸ್ವಾಗತಿಸಿದ್ದು,ನಾವು ಈ ಸವಾಲನ್ನು ಸ್ವೀಕರಿಸುತ್ತೇವೆ ಎಂದಿದ್ದಾರೆ.





