ಏಶ್ಯನ್ ಗೇಮ್ಸ್: ಶೂಟರ್ ಸರ್ನೊಬಾಟ್‌ಗೆ ಸ್ವರ್ಣ

ಜಕಾರ್ತ, ಆ.22: ಭಾರತದ ಹಿರಿಯ ಶೂಟರ್ ರಾಹಿ ಸರ್ನೊಬಾಟ್ ಏಶ್ಯನ್ ಗೇಮ್ಸ್‌ನ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ವರ್ಣದ ಪದಕ ಜಯಿಸಿದ್ದಾರೆ.
ಇಲ್ಲಿ ಬುಧವಾರ ನಡೆದ ಫೈನಲ್ ಸುತ್ತಿನ ಸ್ಪರ್ಧೆಯಲ್ಲಿ 34 ಅಂಕ ಗಳಿಸಿದ ಸರ್ನೊಬಾಟ್ ಏಶ್ಯನ್ ಗೇಮ್ಸ್‌ನಲ್ಲಿ ದಾಖಲೆ ಸ್ಕೋರ್ ಗಳಿಸಿದ್ದಲ್ಲದೆ ಚಿನ್ನ ಜಯಿಸಿದರು. ಥಾಯ್ಲೆಂಡ್‌ನ ನೆಫಾಸ್ವಾನ್ ಭಾರತದ ಶೂಟರ್‌ಗೆ ತೀವ್ರ ಪೈಪೋಟಿ ನೀಡಿದರೂ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಶೂಟರ್ ಮನು ಭಾಕರ್ ಆರನೇ ಸ್ಥಾನ ಪಡೆದರು.
27ರ ಹರೆಯದ ಸರ್ನೊಬಾಟ್ 2014ರಲ್ಲಿ ಇಂಚೋನ್‌ನಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು. ಇದೀಗ ಮೊದಲ ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸರ್ನೊಬಾಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರು ಬಾರಿ(2010,2014ರಲ್ಲಿ ಚಿನ್ನ,2010ರಲ್ಲಿ ಬೆಳ್ಳಿ)ಪದಕ ಜಯಿಸಿದ್ದಾರೆ.
ಸರ್ನೊಬಾಟ್ ಪ್ರಸ್ತುತ ಏಶ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನ ಗೆದ್ದುಕೊಟ್ಟರು. ಚಿನ್ನ ಜಯಿಸಿದ ಎರಡನೇ ಶೂಟರ್ ಎನಿಸಿಕೊಂಡರು.
ಗೇಮ್ಸ್‌ನ 3ನೇ ದಿನವಾದ ಮಂಗಳವಾರ 16ರ ಹರೆಯದ ಬಾಲಕ ಸೌರಭ್ ಚೌಧರಿ ಪುರುಷರ 10 ಮೀ. ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.







