ಕೇರಳ ಪ್ರವಾಹ: ಮೀನುಗಾರರೇ ರಿಯಲ್ ಸೂಪರ್ ಮ್ಯಾನ್‍ಗಳು

*ಸಾಜಿನ್ ಸಾಜು
ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಂ
ಪ್ರವಾಹ ಪೀಡಿತ ಕೇರಳದ ಪಾಲಿಗೆ ಮೀನುಗಾರರೇ ರಿಯಲ್ ಸೂಪರ್ ಮ್ಯಾನ್‍ಗಳು. ಕೇರಳದ ನೆರೆ ಪೀಡಿತ ದುರ್ಗಮ ಪ್ರದೇಶಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲೇ ಸಾರಿಗೆ ಹಾಗೂ ಟ್ರಕ್‍ಗಳಲ್ಲಿ ಯಾಂತ್ರೀಕೃತ ದೋಣಿಗಳನ್ನು ಸಾಗಿಸಲು ಟ್ರಕ್‍ಗಳಿಗೆ ಇಂಧನದ ವ್ಯವಸ್ಥೆಯೊಂದಿಗೆ 1000ಕ್ಕೂ ಅಧಿಕ ಮೀನುಗಾರರು ತೆರಳಿ ತಮ್ಮ ಜೀವದ ಹಂಗನ್ನು ತೊರೆದು ಪ್ರಾಣ ರಕ್ಷಣೆಯ ಕಾರ್ಯ ಮಾಡಿದರು. ಕಾಕತಾಳೀಯವೆಂದರೆ ಕೆಲ ತಿಂಗಳ ಹಿಂದೆ ಇದೇ ಮೀನುಗಾರರು, ಓಖಿ ಚಂಡಮಾರುತದ ಹೊಡೆತದಿಂದ ಜರ್ಜರಿತರಾಗಿದ್ದು, ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ.
ಎಲ್ಲ ಹೀರೊಗಳು ಕ್ಯಾಪ್ ಧರಿಸುವುದಿಲ್ಲ; ಕೆಲವರು ರುಮಾಲು ಮತ್ತು ಶಾಲುಗಳನ್ನು ಸುತ್ತಿಕೊಂಡಿರುತ್ತಾರೆ!
ಕೇರಳ ಪ್ರವಾಹದಲ್ಲಿ ಅನಭಿಷಿಕ್ತ ದೊರೆಗಳು ಎನಿಕೊಂಡ ಮೀನುಗಾರರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಪ್ರತಿಕೂಲ ಹವಾಮಾನದಲ್ಲೂ, ಮುನ್ನುಗ್ಗಿ ಬರುವ ನೀರನ್ನೂ ಲೆಕ್ಕಿಸದೇ ನೂರಾರು ಮೀನುಗಾರರು ಪ್ರವಾಹಪೀಡಿತ ಪ್ರದೇಶಗಳ ಸಾವಿರಾರು ಮಂದಿಯ ರಕ್ಷಣೆಗೆ ಧಾವಿಸಿದರು. ಇವರ ಕೆಚ್ಚು ಹಾಗೂ ಪ್ರಕ್ಷುಬ್ಧ ನೀರಿನಲ್ಲಿನ ಅನುಭವ, ವಿಮಾನದ ಮೂಲಕ ರಕ್ಷಣಾ ಕಾರ್ಯ ಕೈಗೊಳ್ಳುವುದು ಕಾರ್ಯಸಾಧುವಲ್ಲ ಎನಿಸುವ ಪ್ರದೇಶಗಳಲ್ಲಿ ಅಥವಾ ಆ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಹಾಗೂ ಎನ್‍ಡಿಆರ್‍ಎಫ್ ಸಿಬ್ಬಂದಿಗೆ ಪರಿಹಾರ ಕಾರ್ಯ ಕೈಗೊಳ್ಳಲು ನೆರವಾದವು.
ತಮ್ಮ ನಾವೆಗಳೊಂದಿಗೆ ತೀರಾ ಕಡಿದಾದ ಪ್ರದೇಶಗಳಿಗೂ ಸಾಹಸಯಾನ ಕೈಗೊಂಡ ಇವರು, ಚೆಂಗನ್ನೂರು ಮತ್ತು ಕುಟ್ಟಂಡ್‍ನಂಥ ಸೂಕ್ಷ್ಮ ಪ್ರದೇಶಗಳಿಂದ ಜನರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಜತೆಗೆ ಇಲ್ಲಿನ ಪರಿಹಾರ ಶಿಬಿರಗಳಿಗೆ ಪರಿಹಾರ ಸಾಮಗ್ರಿ, ಅಗತ್ಯ ಆಹಾರ ವಸ್ತು ಮತ್ತು ಕುಡಿಯುವ ನೀರು ಒದಗಿಸಿದರು. ಈ ಅಪೂರ್ವ ಸಾಹಸ ಮೆರೆದ ಬಹುತೇಕ ಮೀನುಗಾರರು ಮಲಪ್ಪುರಂ, ಕೊಲ್ಲಂ, ಕಣ್ಣೂರು, ತ್ರಿಶ್ಶೂರು, ಎರ್ನಾಕುಲಂ ಮತ್ತು ತಿರುವನಂತಪುರಂ ಜಿಲ್ಲೆಗಳಿಗೆ ಸೇರಿದವರು.
ಈ ಪೈಕಿ ಬಹುತೇಕ ಮಂದಿ ದಯನೀಯ ಸ್ಥಿತಿಯಲ್ಲಿರುವವರು; ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಗಲು ರಾತ್ರಿ ದುಡಿಯುವವರು; ಇಷ್ಟಾಗಿಯೂ ಅಪಾಯ ಮೈಮೇಲೆ ಎಳೆದುಕೊಂಡಿದಾದರೆ. ಮಲಪ್ಪುರಂ ಜಿಲ್ಲೆಯ ಎಂ.ಕೆ.ಮಜೀದ್, ತ್ರಿಶ್ಶೂರಿನ ಮತ್ತತ್ತೂರಿನಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡ ತಮ್ಮ ಅನುಭವವನ್ನು ಹೀಗೆ ಬಿಚ್ಚಿಟ್ಟಿದ್ದಾರೆ: ``ಪ್ರವಾಹ ನೀರಿನ ತೀವ್ರ ಸೆಳೆತದಿಂದಾಗಿ ನಮ್ಮ ದೋಣಿಯನ್ನು ಮುನ್ನಡೆಸಲು ಹೆಣಗಬೇಕಾಯಿತು. ಒಂದು ಹಂತದಲ್ಲಂತೂ ನಾವು ಜೀವಂತ ಉಳಿಯುವ ಬಗ್ಗೆಯೇ ಆತಂಕ ಎದುರಾಯಿತು ''ಎಂದು 43 ವರ್ಷದ ಮಜೀದ್ ನಡುಗುವ ಧ್ವನಿಯಲ್ಲಿ ಹೇಳಿದರು.
``ನನ್ನ ದೋಣಿ ಒಂದು ಗೋಡೆಗೆ ಡಿಕ್ಕಿ ಹೊಡೆದು ಹಾನಿಗೀಡಾಯಿತು. ಅದನ್ನು ಅಲ್ಲೇ ಬಿಟ್ಟು, ಮತ್ತೊಂದು ದೋಣಿಯಲ್ಲಿ ನಾವು ರಕ್ಷಣಾ ಕಾರ್ಯ ಮುಂದುವರಿಸಬೇಕಾಯಿತು. ಪ್ರವಾಹ ನೀರು ತುಂಬಿದ್ದ ಮನೆಯಿಂದ ವೃದ್ಧ ದಂಪತಿಯನ್ನು ರಕ್ಷಿಸಿದ ಕ್ಷಣ ಜೀವನದಲ್ಲೇ ಸ್ಮರಣೀಯ ಅನುಭವ''ಎಂದು ಅವರು ಹೇಳಿದರು.
`` ತಮ್ಮ ಸಾವು ನಿಶ್ಚಿತ ಎನ್ನುವುದು ಅವರಿಗೆ ಮನವರಿಕೆಯಾಗಿತ್ತು. ಒಂದೇ ಸಮನೆ ಏರುತ್ತಿರುವ ನೀರಿ£ಂದ ರಕ್ಷಿಸಿಕೊಳ್ಳಲು, 70ರ ಆಸುಪಾಸಿನ ಈ ದಂಪತಿ ಒಂದು ಹಾಸಿಗೆಯ ಮೇಲೆ ಮತ್ತೊಂದು ಹಾಸಿಗೆ ಇಟ್ಟು ಅದರ ಮೇಲೆ ಕುಳಿತಿದ್ದರು. ಅವರು ಬಹುತೇಕ ಜೀವದ ಆಸೆ ಬಿಟ್ಟುಬಿಟ್ಟಿದ್ದರು. ಕಣ್ಣೀರ ಕೋಡಿ ಹರಿಯುತ್ತಿತ್ತು. ಅವರನ್ನು ರಕ್ಷಿಸಿದ ಆ ಕ್ಷಣವನ್ನು ಎಂದೂ ಮರೆಯಲಾರೆ''.
``ನಾನು ಮತ್ತು ನಮ್ಮ ಸ್ನೇಹಿತರು ಹಣಕ್ಕಾಗಿ ಇದನ್ನು ಮಾಡಲಿಲ್ಲ''ಎನ್ನುವುದು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡ ಮತ್ತೊಬ್ಬ ಮೀನುಗಾರ ರಜಾಕ್ ಕೊತ್ತಿನ್ ಅವರ ಹೇಳಿಕೆ.
``ಎರಡು ದಿನಗಳ ಅವಧಿಯಲ್ಲಿ ನಾವು 80 ಟ್ರಿಪ್‍ಗಳಲ್ಲಿ 150ಕ್ಕೂ ಹೆಚ್ಚು ಮಂದಿಯನ್ನು ಚಲಕುಡಿ ಪ್ರದೇಶದಿಂದ ರಕ್ಷಿಸಿದೆವು''ಎಂದು ಅವರು ಹೇಳಿದರು. ಪ್ರವಾಹದಿಂದ ತೀರಾ ಸಂಕಷ್ಟಕ್ಕೀಡಾದ ಮತ್ತೊಂದು ಪ್ರದೇಶವಾದ ಚಲಕುಡಿಗೆ ರಜಾಕ್ ತಮ್ಮ ಸ್ನೇಹಿತರ ಜತೆ ಎರಡು ದೋಣಿಗಳೊಂದಿಗೆ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದರು. ``ಹಣದ ಲಾಭ ನಿರೀಕ್ಷಿಸಿ ನಾವು ಅಲ್ಲಿಗೆ ಹೋಗಲಿಲ್ಲ. ಅವರ ಬಗ್ಗೆ ನಮಗೆ ಅನುಕಂಪವಿತ್ತು. ನಮ್ಮ ಜನರಿಗಾಗಿ ನಾವದನ್ನು ಮಾಡಿದೆವು'' ಎಂದು ಅವರು ವಿವರಿಸಿದರು.
ಮಜೀದ್ ಹಾಗೂ ರಜಾಕ್‍ನಂಥ ಮೀನುಗಾರರ ಪ್ರಯತ್ನವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಕ್ಷಣ ಗುರುತಿಸಿ ಶ್ಲಾಘಿಸಿದ್ದಾರೆ. ರಕ್ಷಣಾ ಮತ್ತುಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲ ಮೀನುಗಾರರನ್ನು ಸನ್ಮಾನಿಸಲಾಗುವುದು ಎಂದು ಘೋಷಿಸಿದ್ದಾರೆ. ಮೀನುಗಾರರು ಶ್ರೇಷ್ಠ ರೀತಿಯಲ್ಲಿ ಮಧ್ಯಪ್ರವೇಶಿಸಿದ್ದಾರೆ. ಅವರ ಪೈಕಿ ಹಲವರ ದೋಣಿಗಳು ಹಾನಿಗೀಡಾಗಿವೆ. ಅವರಿಗೆ ಆದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲಿದೆ. ಇದಲ್ಲದೇ, ಪ್ರತಿ ದೋಣಿಗೆ ದಿನಕ್ಕೆ 3000 ರೂಪಾಯಿನಂತೆ ನೀಡಲಾಗುತ್ತದೆ ಹಾಗೂ ಇಂಧನ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ, ಶತಮಾನದಲ್ಲೇ ಭೀಕರ ಎ£ಸಿದ ಈ ಬಾರಿಯ ಮುಂಗಾರಿನಲ್ಲಿ 210ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಕಾರ, ಆರಂಭಿಕ ಅಂದಾಜಿನಂತೆ ನಷ್ಟದ ಪ್ರಮಾಣ 19512 ಕೋಟಿ ರೂಪಾಯಿ.
2004 ಡಿಸೆಂಬರ್‍ನ ಸುನಾಮಿ ದುರಂತದ ನೆನಪು ಇನ್ನೂ ಮಾಸುವ ಮುನ್ನವೇ, ಈ ಮೀನುಗಾರರು ಕರಾವಳಿ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡ ಜನರ ಅಸಹಾಯಕತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ಕಡಲ ಮಕ್ಕಳನ್ನು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯ ನೈಜ ಸಾಹಸಿಗಳು ಎಂದು ಪರಿಗಣಿಸಬೇಕಿದೆ. ಪ್ರವಾಹದ ತೀವ್ರತೆ ಕಡಿಮೆಯಾಗಿ, ಕೇರಳ ಸಹಜ ಸ್ಥಿತಿಯತ್ತ ಮರಳುವಾಗ, ರಾಜ್ಯದ ಜನ ಈ ಮೀನುಗಾರರು ತಮಗೆ ನೀಡಿದ ಸಹಕಾರವನ್ನು ಮರೆಯಬಾರದು.







