ಕೆಎಸ್ಸಾರ್ಟಿಸಿಗೆ 3.42 ಕೋಟಿ ರೂ.ನಷ್ಟ
ಮಳೆ-ಪ್ರವಾಹ

ಬೆಂಗಳೂರು, ಆ. 22: ಕೊಡಗು, ಕರಾವಳಿ ಹಾಗೂ ಕೇರಳದಲ್ಲಿನ ಮಳೆ ಹಾಗ ಪ್ರವಾಹ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಬಸ್ ಸಂಚಾರ ರದ್ದುಗೊಳಿಸಿದ್ದರಿಂದ ಸಂಸ್ಥೆಗೆ 3.42 ಕೋಟಿ ರೂ.ನಷ್ಟ ಉಂಟಾಗಿದೆ.
ಮಳೆಯಿಂದ ಸುಮಾರು 1,07,515ಕಿ.ಮೀ. ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು ಸುಮಾರು 2,445 ಬಸ್‌ಗಳ ಮಾರ್ಗ ಸಂಚಾರ ರದ್ದುಗೊಳಿಸಲಾಗಿತ್ತು. ಹೀಗಾಗಿ ಕೆಎಸ್ಸಾರ್ಟಿಸಿಗೆ ಸುಮಾರು 3.42 ಕೋಟಿ ರೂ.ನಷ್ಟ ಅನುಭವಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಕೇರಳಕ್ಕೆ ತೆರಳುವ ಬಸ್‌ಗಳ ಸ್ಥಗಿತದ ಜತೆಗೆ ಮಂಗಳೂರು ಮತ್ತು ಮಡಕೇರಿ ವಿಭಾಗಗಳಲ್ಲಿ ಬಸ್‌ಗಳ ಓಡಾಟ ರದ್ದುಗೊಳಿಸಲಾಗಿತ್ತು. ಮಳೆಯಿಂದ ಜನ ಮುಂಗಡ ಕಾದಿರಿಸಿದ್ದ ಟಿಕೆಟ್ ರದ್ದುಗೊಳಿಸಿದ್ದು, ಸುಮಾರು 17,175 ಮಂದಿ ತಮ್ಮ ಟಿಕೆಟ್ ರದ್ದುಪಡಿಸಿದ್ದು, ಪ್ರಯಾಣಿಕರಿಗೆ 1.18 ಕೋಟಿ ರೂ.ಟಿಕೆಟ್ ಹಣವನ್ನು ಹಿಂದಿರುಗಿಸಲಾಗಿದೆ.
ಸಂಚಾರ ಪುನರ್ ಆರಂ: ರದ್ದಾಗಿದ್ದ ಮಂಗಳೂರು-ಬೆಂಗಳೂರು ಐಷರಾಮಿ ಬಸ್ ಸಂಚಾರ ನಿನ್ನೆಯಿಂದ ಆರಂಭವಾಗಿದ್ದು, ನಿನ್ನೆ ಹತ್ತು ಪ್ರಿಮೀಯಂ ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಜತೆಗೆ ನಿನ್ನೆ ರಾತ್ರಿ 32 ಪ್ರೀಮಿಯಂ ಬಸ್‌ಗಳು ಉಡುಪಿ, ಕುಂದಾಪುರ, ಮಂಗಳೂರು, ಧರ್ಮಸ್ಥಳಗಳಿಗೆ ಸಂಚಾರ ಆರಂಭಿಸಿದ್ದು, ಚಾರ್ಮುಡಿ, ಕುದುರೆಮುಖ ಮತ್ತು ಶಿವಮೊಗ್ಗ ಮಾರ್ಗದಲ್ಲಿ ಈ ಬಸ್‌ಗಳು ಸಂಚಾರ ಪುನರ್ ಆರಂಭಿಸಿವೆ.
ಪರಿಹಾರ ಸಾಮಗ್ರಿ ರವಾನೆ: ಕೆಎಸ್ಸಾರ್ಟಿಸಿ ಬಸ್‌ಗಳ ಮೂಲಕವೂ ಮಡಕೇರಿಯ ನೆರೆ ಸಂತ್ರಸ್ಥರಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದ್ದು, ನಿನ್ನೆ ಒಂದೆ ದಿನ 14ಬಸ್‌ಗಳಲ್ಲಿ 180 ಬಾಕ್ಸ್ ಪರಿಹಾರ ಸಾಮಗ್ರಿ ರವಾನಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.





