ಮೂರನೇ ಟೆಸ್ಟ್: ಕೊಹ್ಲಿ ಪಡೆಗೆ ಭರ್ಜರಿ ಜಯ
ಕೊನೆಯ ದಿನ 10 ನಿಮಿಷದಲ್ಲಿ ಆಂಗ್ಲರ ಹೋರಾಟ ಅಂತ್ಯ

ಟ್ರೆಂಟ್‌ಬ್ರಿಡ್ಜ್, ಆ.22: ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭರ್ಜರಿ ಜಯ(203) ಸಾಧಿಸಿದೆ.
ಮೂರನೇ ಟೆಸ್ಟ್ ಗೆಲ್ಲಲು 521 ರನ್ ಕಠಿಣ ಗುರಿ ಪಡೆದಿದ್ದ ಇಂಗ್ಲೆಂಡ್ 4ನೇ ದಿನವಾದ ಮಂಗಳವಾರ ಆಟ ಕೊನೆಗೊಂಡಾಗ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಬಾಲಂಗೋಚಿಗಳಾದ ಆದಿಲ್ ರಶೀದ್ ಹಾಗೂ ಆ್ಯಂಡರ್ಸನ್ ಕ್ರೀಸ್ ಕಾಯ್ದುಕೊಂಡಿದ್ದರು.
ಐದನೇ ಹಾಗೂ ಅಂತಿಮ ದಿನವಾದ ಬುಧವಾರ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಕೇವಲ 10 ನಿಮಿಷದಲ್ಲಿ 17 ಎಸೆತಗಳನ್ನು ಎದುರಿಸುವಷ್ಟರಲ್ಲಿ 317 ರನ್‌ಗೆ ಆಲೌಟಾಯಿತು.
ಆ್ಯಂಡರ್ಸನ್(11) ವಿಕೆಟ್ ಉರುಳಿಸಿದ ಸ್ಪಿನ್ನರ್ ಆರ್.ಅಶ್ವಿನ್ ಇಂಗ್ಲೆಂಡ್ ತಂಡವನ್ನು 104.5 ಓವರ್‌ಗಳಲ್ಲಿ ಆಲೌಟ್ ಮಾಡಿದರು. ಆದಿಲ್ ರಶೀದ್ ಔಟಾಗದೆ 33 ರನ್ ಗಳಿಸಿದರು.
ಮೂರನೇ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಾನೇಕೆ ವಿಶ್ವದ ನಂ.1 ತಂಡ ಎನ್ನುವುದನ್ನು ತೋರಿಸಿಕೊಟ್ಟಿತು. ನಾಯಕ ವಿರಾಟ್ ಕೊಹ್ಲಿ ಎರಡೂ ಇನಿಂಗ್ಸ್‌ನಲ್ಲಿ ಬರೋಬ್ಬರಿ 200 ರನ್ ಗಳಿಸಿದರು. ದೀರ್ಘ ಸಮಯದ ಬಳಿಕ ತಂಡಕ್ಕೆ ವಾಪಸಾದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಎರಡನೇ ಇನಿಂಗ್ಸ್‌ನಲ್ಲಿ 85ಕ್ಕೆ 5 ವಿಕೆಟ್‌ಗಳನ್ನು ಪಡೆದರೆ, ಇಶಾಂತ್ ಶರ್ಮಾ 70 ರನ್‌ಗೆ 2 ವಿಕೆಟ್ ಪಡೆದರು.







