ಪ್ಲಾಸ್ಟಿಕ್ ಕಂಟೇನರ್‌ಗಳನ್ನು ಬಳಸಬಾರದು ಎನ್ನುವುದಕ್ಕೆ ಕಾರಣಗಳಿಲ್ಲಿವೆ

ಪ್ಲಾಸ್ಟಿಕ್ ವಸ್ತುಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಆಹಾರ ಸಂಗ್ರಹದಿಂದ ಹಿಡಿದು ಟಾಯ್ಲೆಟ್ ವಸ್ತುಗಳವರೆಗೆ, ಕೈಚೀಲಗಳಿಂದ ಹಿಡಿದು ನೀರಿನ ಬಾಟ್ಲಿಗಳವರೆಗೆ ನಾವು ಪ್ಲಾಸ್ಟಿಕ್‌ನ್ನು ಅವಲಂಬಿಸಿದ್ದೇವೆ.
ಕಂಪ್ಯೂಟರ್‌ಗಳು,ಲ್ಯಾಪ್‌ಟಾಪ್‌ಗಳು,ಮೊಬೈಲ್ ಫೋನ್‌ಗಳಂತಹ ವಿದ್ಯುನ್ಯಾನ ಸಾಧನಗಳ ರೂಪದಲ್ಲಿ ತಂತ್ರಜ್ಞಾನದ ಪ್ರಗತಿಯಲ್ಲಿ ಪ್ಲಾಸ್ಟಿಕ್‌ನ ಕೊಡುಗೆ ದೊಡ್ಡದಿದ್ದರೂ ಆಹಾರ ಸಂಬಂಧಿ ಉದ್ದೇಶಗಳಿಗೆ ಪ್ಲಾಸ್ಟಿಕ್‌ನ ಬಳಕೆ ಒಳ್ಳೆಯದಲ್ಲ. ನೀವು ಆಹಾರವನ್ನು ಹಾಕಿಡಲು ಪ್ಲಾಸ್ಟಿಕ್ ಡಬ್ಬಿಗಳನ್ನು ಖಂಡಿತ ಬಳಸಕೂಡದು. ಏಕೆ ಎನ್ನುವುದನ್ನು ಓದಿ.....
ಕಲ್ಲಿದ್ದಲು,ನೈಸರ್ಗಿಕ ಅನಿಲ,ಸೆಲ್ಯುಲೋಸ್,ಉಪ್ಪು ಮತ್ತು ಕಚ್ಚಾ ತೈಲಗಳಂತಹ ನೈಸರ್ಗಿಕ ಉತ್ಪನ್ನಗಳಿಂದ ಪ್ಲಾಸ್ಟಿಕ್ ತಯಾರಾಗುತ್ತದೆ. ವೇಗವರ್ಧಕಗಳ ಉಪಸ್ಥಿತಿಯಲ್ಲಿ ಇವೆಲ್ಲವೂ ಪಾಲಿಮರೈಜೇಷನ್ ಪ್ರಕ್ರಿಯೆಗೆ ಒಳಗಾಗುತ್ತವೆ. ಇದರ ಪರಿಣಾಮವಾಗಿ ಉತ್ಪನ್ನವಾಗುವ ಸಂಯುಕ್ತಗಳನ್ನು ಪಾಲಿಮರ್‌ಗಳೆಂದು ಕರೆಯಲಾಗುತ್ತದೆ ಮತ್ತು ಪ್ಲಾಸ್ಟಿಕ್‌ನ್ನು ತಯಾರಿಸಲು ಇವುಗಳಿಗೆ ಇತರ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ.
ಪ್ಲಾಸ್ಟಿಕ್ ವಿಷಕಾರಿಯಾಗಲು ಅದರಲ್ಲಿರುವ ರಾಸಾಯನಿಕಗಳೇ ಕಾರಣವಾಗಿವೆ. ಒಂದು ಪ್ಲಾಸ್ಟಿಕ್ ಭಾಗದಲ್ಲಿ 5ರಿಂದ 30 ವಿವಿಧ ರಾಸಾಯನಿಕಗಳು ಬಳಕೆಯಾಗುತ್ತವೆ. ಮಕ್ಕಳಿಗೆ ಹಾಲು,ನೀರು ಇತ್ಯಾದಿ ಕುಡಿಸಲು ಬಳಸಲಾಗುವ ಬೇಬಿ ಬಾಟಲ್‌ಗಳಲ್ಲಿ 100ಕ್ಕೂ ಅಧಿಕ ರಾಸಾಯನಿಕಗಳನ್ನು ಒಳಗೊಂಡಿರುವ ಹಲವಾರು ಪ್ಲಾಸ್ಟಿಕ್ ಭಾಗಗಳಿರುತ್ತವೆ.
►ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ದೇಹತೂಕವನ್ನು ಹೆಚ್ಚಿಸುತ್ತವೆ
ಪ್ಲಾಸ್ಟಿಕ್‌ನಲ್ಲಿರುವ ಬಿಸ್‌ಫೆನಾಲ್ ಎ(ಬಿಪಿಎ) ಎಂಬ ಸಂಯುಕ್ತವು ಮಾನವ ಶರೀರದಲ್ಲಿ ಎಸ್ಟ್ರೊಜೆನ್‌ನಂತೆ ವರ್ತಿಸುತ್ತದೆ ಮತ್ತು ಶರೀರದಲ್ಲಿಯ ಎಸ್ಟ್ರೊಜೆನ್ ರಿಸೆಪ್ಟರ್‌ಗಳನ್ನು ಕಟ್ಟಿಹಾಕುತ್ತದೆ. ಈ ಸಂಯುಕ್ತವು ದೇಹತೂಕ ನಿಯಂತ್ರಣವನ್ನು ವ್ಯತ್ಯಯಗೊಳಿಸಿ ದೇಹತೂಕವನ್ನು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಬಿಪಿಎ ಬೊಜ್ಜು ಮತ್ತು ದೇಹತೂಕ ಹೆಚ್ಚಲು ಕಾರಣವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಬೆಟ್ಟು ಮಾಡಿವೆ. ಬಿಪಿಎಗೆ ತೆರೆದುಕೊಳ್ಳುವುದರಿಂದ ಶರೀರದಲ್ಲಿ ಕೊಬ್ಬಿನ ಜೀವಕೋಶಗಳೂ ಹೆಚ್ಚಾಗುತ್ತವೆ.
►ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಸೇರುತ್ತವೆ
ಪ್ಲಾಸ್ಟಿಕ್ ಬಿಸಿಯಾದರೆ ರಾಸಾಯನಿಕಗಳನ್ನು ಬಿಡುಗಡೆಗೊಳಿಸುತ್ತದೆ ಮತ್ತು ಮೈಕ್ರೋವೇವ್ ಓವನ್‌ನಲ್ಲಿ ಆಹಾರವನ್ನು ಬಿಸಿ ಮಾಡಲು ಪ್ಲಾಸ್ಟಿಕ್ ಕಂಟೇನರ್‌ಗಳನ್ನ್ನು ಬಳಸಬಾರದು ಎನ್ನಲು ಇದು ಮುಖ್ಯ ಕಾರಣವಾಗಿದೆ. ಶರೀರದಲ್ಲಿನ ಎಸ್ಟ್ರೊಜೆನ್ ಹಾರ್ಮೋನ್‌ಗಳೊಂದಿಗೆ ಪ್ಲಾಸ್ಟಿಕ್ ಸಂಪರ್ಕವಾದರೆ ಅದು ಹೃದ್ರೋಗ,ಮಧುಮೇಹ,ನರವ್ಯೆಕಲ್ಯ,ಕ್ಯಾನ್ಸರ್,ಥೈರಾಯ್ಡಾ ಸಮಸ್ಯೆ ಇತ್ಯಾದಿ ಹಲವಾರು ಕಾಯಿಲೆೆಗಳ ಅಪಾಯವನ್ನುಹೆಚ್ಚಿಸುತ್ತದೆ.
►ಫಲವತ್ತತೆ ಮತ್ತು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗುತ್ತದೆ
ಪ್ಲಾಸ್ಟಿಕ್‌ನ್ನು ಮೃದು ಮತ್ತು ಹಿಗ್ಗುವಂತೆ ಮಾಡಲು ಬಳಸುವ ಫಾಥಲೇಟ್ ಇನ್ನೊಂದು ಅಪಾಯಕಾರಿ ರಾಸಾಯನಿಕವಾಗಿದೆ. ಫುಡ್ ಕಂಟೇನರ್,ಸೌಂದರ್ಯ ಉತ್ಪನ್ನಗಳು,ಆಟಿಕೆಗಳು,ಬಣ್ಣ ಮತ್ತು ಶಾವರ್ ಕರ್ಟೇನ್‌ಗಳಲ್ಲಿ ಈ ವಿಷಕಾರಿ ರಾಸಾಯನಿಕವಿರುತ್ತದೆ. ಇದು ನಿರೋಧಕ ಶಕ್ತಿ ಮತ್ತು ಹಾರ್ಮೋನ್‌ಗಳ ನಿಯಂತ್ರಣದ ಮೇಲೆ ನಕಾರಾತ್ಮಕ ಪರಿಣಾಮಗಳನ್ನುಂಟು ಮಾಡುತ್ತದೆ ಮತ್ತು ನೇರವಾಗಿ ಪಲವತ್ತತೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಇದರ ಜೊತೆಗೆ ಬಿಪಿಎ ಗರ್ಭಪಾತಕ್ಕೆ ಕಾರಣವಾಗುತ್ತದೆ ಮತ್ತು ಗರ್ಭ ಧರಿಸುವ ಮಹಿಳೆಯರ ಸಾಮರ್ಥ್ಯವನ್ನು ಕುಂದಿಸುತ್ತದೆ. ಪ್ಲಾಸ್ಟಿಕ್‌ನಲ್ಲಿಯ ರಾಸಾಯನಿಕಗಳು ಮಕ್ಕಳಲ್ಲಿ ಜನ್ಮಜಾತ ದೋಷಗಳು ಮತ್ತು ಬೆಳವಣಿಗೆ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎನ್ನುವುದೂ ಸಂಶೋಧನೆಗಳಲ್ಲಿ ಸಾಬೀತಾಗಿದೆ.







