ಪ್ರಮುಖ ಸಾಕ್ಷಿಯ ನಿಗೂಢ ಸಾವು, ಮರಣೋತ್ತರ ಪರೀಕ್ಷೆಗೆ ಮೊದಲೇ ಶವ ದಫನ್!
ಉನ್ನಾವೊ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ

ಲಕ್ನೋ, ಆ.22: ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ ಸಿಂಗ್ ಸೆಂಗಾರ್ ಭಾಗಿಯಾಗಿರುವ ಉನ್ನಾವೊ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಯೂನುಸ್ ಎಂಬಾತ ನಿಗೂಢವಾಗಿ ಮೃತಪಟ್ಟಿದ್ದು, ಆತನ ಕುಟುಂಬಿಕರು ಮರಣೋತ್ತರ ಪರೀಕ್ಷೆಗೆ ಮುನ್ನವೇ ಅವಸರದಿಂದ ಶವವನ್ನು ದಫನ್ ಮಾಡಿದ್ದಾರೆ.
ಯೂನುಸ್ ಸಾವಿನ ಹಿಂದೆ ಒಳಸಂಚು ಇರುವ ಬಗ್ಗೆ ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ ಆರೋಪಿಸಿದ್ದು, ಜೈಲಿನಲ್ಲಿರುವ ಸೆಂಗಾರ್ ಮತ್ತು ಆತನ ಗೂಂಡಾಗಳು ಈ ನಿಗೂಢ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.
ಸೆಂಗಾರ್ ಸೋದರ ಅತುಲ ಸಿಂಗ್ ಸೆಂಗಾರ್ ಮತ್ತು ಇತರ ನಾಲ್ವರು ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಬರ್ಬರವಾಗಿ ಥಳಿಸಿದ್ದರಿಂದ ಆತ ಬಳಿಕ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದ. ಈ ಕೊಲೆ ಪ್ರಕರಣದಲ್ಲಿ ಯೂನುಸ್ ಸಿಬಿಐ ಪರ ಮುಖ್ಯ ಸಾಕ್ಷಿಯಾಗಿದ್ದ. ಉನ್ನಾವೊದ ಮಖಿ ಗ್ರಾಮದಲ್ಲಿ ದಿನಸಿ ಅಂಗಡಿಯನ್ನು ಹೊಂದಿದ್ದ ಯೂನುಸ್ ಕಣ್ಣೆದುರೇ ಸಂತ್ರಸ್ತೆಯ ತಂದೆಯ ಮೇಲೆ ದಾಳಿ ನಡೆದಿತ್ತು.
ಯೂನುಸ್ ಶನಿವಾರ ದಿಢೀರ್ ಆಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಮತ್ತು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದಿದ್ದ ಎಂದು ಗ್ರಾಮಸ್ಥರು ತಿಳಿಸಿದರು. ಯೂನುಸ್‌ನ ಕುಟುಂಬಿಕರು ಸಿಬಿಐ ಮತ್ತು ಪೊಲೀಸರಿಗೂ ತಿಳಿಸದೆ ಆತನ ಶವವನ್ನು ದಫನ್ ಮಾಡಿದ್ದಾರೆ.
ಯೂನುಸ್ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ,ಸೆಂಗಾರ್‌ನ ಕಡೆಯವರು ಆತನಿಗೆ ವಿಷಪ್ರಾಶನ ಮಾಡಿಸಿರಬಹುದು ಎಂದು ಹೇಳಿದ್ದಾರೆ. ಸಾವಿಗೆ ಕಾರಣವನ್ನು ತಿಳಿದುಕೊಳ್ಳಲು ಯೂನುಸ್ ಶವವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿಬಿಐನಿಂದ ದೂರವಿರುವಂತೆ ಮತ್ತು ಸೆಂಗಾರ್ ಹಾಗೂ ಆತನ ಸೋದರನ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ಶಾಸಕನ ಗೂಂಡಾಗಳು ಸಾಕ್ಷಿಗಳಿಗೆ ಮತ್ತು ಗ್ರಾಮಸ್ಥರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಈ ಬಗ್ಗೆ ಮುಂದಿನ ವಾರ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲು ಅವರು ನಿರ್ಧರಿಸಿದ್ದಾರೆ.







