ಆ. 25: ಶಿರೂರುಶ್ರೀ ಆರಾಧನೋತ್ಸವ
ಉಡುಪಿ, ಆ.22: ಉಡುಪಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ ಆರಾಧನೋತ್ಸವ ಆ.25ರ ಶನಿವಾರದಂದು ಹಿರಿಯಡ್ಕ ಸಮೀಪದ ಶಿರೂರು ಮೂಲಮಠದಲ್ಲಿ ಜರುಗಲಿದೆ.
ವಿವಿಧ ಹೋಮಹವನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ವೈದಿಕರು ನಡೆಸಿ ವೃಂದಾವನಕ್ಕೆ ಪೂಜೆ, ಹವನಗಳ ಪ್ರಸಾದವನ್ನು ಸಮರ್ಪಿಸಲಿದ್ದಾರೆ. ಆ.25ರ ಸಂಜೆ ಶಿರೂರು ಮುಖ್ಯಪ್ರಾಣ ದೇವರಿಗೆ ರಂಗಪೂಜೆ ನಡೆಯಲಿದೆ. ಶಿರೂರು ಶ್ರೀಗಳು ನಿಧನಾನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಪ್ರವೇಶವಿರುವ ರಂಗ ಪೂಜೆ ನಡೆಯುತ್ತಿದೆ. ಮತ್ತು ಇನ್ನು ಮುಂದೆ ಪ್ರತಿ ಶನಿವಾರ ಹಿಂದಿನಂತೆ ಸಾರ್ವಜನಿಕರಿಗೆ ಪ್ರವೇಶ ಇರುವ ರಂಗಪೂಜೆ ನಡೆಯಲಿದೆ ಎಂದು ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಮೊದಲು ಪೊಲೀಸರು ಇದುವರೆಗೆ ತನಿಖೆ ಸಂಬಂಧ ಹಾಕಲಾಗಿದ್ದ ಬಂದೋಬಸ್ತ್‌ನ್ನು ಹಿಂದಕ್ಕೆ ಪಡೆಯಲಿದ್ದಾರೆ. ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು ಅವರ ಮಾರ್ಗದರ್ಶನದಲ್ಲಿ ಶಿರೂರು ಮಠಕ್ಕೆ ನೇಮಿಸಿದ ಸಮಿತಿಯು ಆರಾಧನೆಯನ್ನು ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.





