20 ಸಾವಿರ ಕೋ.ರೂ.ಗೂ ಅಧಿಕ ನಷ್ಟ ಯಾರು ತುಂಬಿ ಕೊಡ್ತಾರೆ: ಕೇಂದ್ರಕ್ಕೆ ಕೇರಳ ಪ್ರಶ್ನೆ

ಹೊಸದಿಲ್ಲಿ, ಆ.22: ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೇರಳ ರಾಜ್ಯಕ್ಕೆ ಯುಎಇ ಸೇರಿದಂತೆ ಅನೇಕ ರಾಷ್ಟ್ರಗಳು ಆರ್ಥಿಕ ನೆರವು ನೀಡಲು ಮುಂದಾಗಿದ್ದರೂ ಕೇಂದ್ರ ಸರಕಾರ ಮಾತ್ರ ವಿದೇಶಿ ಸರಕಾರದ ನೆರವು ಸ್ವೀಕರಿಸಲು ಮುಂದಾಗುತ್ತಿಲ್ಲ. ಯಾವುದೇ ವಿದೇಶಿ ದೇಣಿಗೆ ಸ್ವೀಕರಿಸಬಾರದೆಂಬ ನಿಯಮವಿದೆ ಎಂಬುದು ಕೇಂದ್ರದ ಉತ್ತರ. ಕೇಂದ್ರದ ಈ ನಿಲುವು ಕೇರಳ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಪ್ರವಾಹದಿಂದ 25 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಇದನ್ನು ಯಾರು ತುಂಬಿಕೊಡುತ್ತಾರೆ ಎಂದು ಕೇಂದ್ರವನ್ನು ಕೇರಳ ಪ್ರಶ್ನಿಸಿದೆ.
2,600 ಕೋ.ರೂ. ಬೇಡಿಕೆ ಇಟ್ಟಿದ್ದ ಕೇರಳಕ್ಕೆ ಕೇಂದ್ರ ಕೊಟ್ಟಿದ್ದು 600 ಕೋಟಿ ರೂ. ಮಾತ್ರ. ಕೇರಳಕ್ಕೆ ಆಗಿರುವ ಅಪಾರ ನಷ್ಟಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ. ಬೇರೆ ರಾಷ್ಟ್ರಗಳ ಸಹಾಯಕ್ಕೂ ಅಡ್ಡಗಾಲು ಹಾಕುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್, ಹಣಕಾಸು ಸಚಿವ ಥಾಮಸ್ ಐಸಾಕ್ ಹಾಗೂ ಮಾಜಿ ಸಿಎಂ ಉಮ್ಮನ್ ಚಾಂಡಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳಕ್ಕೂ, ಅರಬ್‌ನಾಡಿಗೂ ಅವಿನಾಭಾವ ಸಂಬಂಧವಿದೆ. ಕೇರಳದ ಜನತೆಗೆ ಯುಎಇ ಎರಡನೇ ದೇಶವಿದ್ದಂತೆ. ಅರಬ್ ರಾಷ್ಟ್ರಗಳು ತಮ್ಮ ನೆರವಿಗೆ ಬರುವುದರಲ್ಲಿ ತಪ್ಪಿಲ್ಲ ಎಂಬುದು ಕೇರಳದ ವಾದ.
ಯುಎಇ ಕೇರಳಕ್ಕೆ 700 ಕೋಟಿ ರೂ.ನೆರವಿಗೆ ಪ್ಯಾಕೇಜ್ ನೀಡಲು ಮುಂದಾಗಿತ್ತು. ಬೇರೆ ಅರಬ್ ರಾಷ್ಟ್ರಗಳಿಂದಲೂ ಹಣದ ನೆರವು ಹರಿದುಬರುವ ಸಾಧ್ಯತೆಯಿತ್ತು. ಥಾಯ್ಲೆಂಡ್ ದೇಶ ಕೂಡ ಆರ್ಥಿಕ ನೆರವಿಗೆ ಮುಂದಾಗಿತ್ತು. ಆದರೆ, ವಿದೇಶದಿಂದ ದೇಣಿಗೆ ಪಡೆಯಬಾರದೆಂಬ 2004ರ ವಿಪತ್ತು ನೆರವು ನೀತಿಯನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ವಿದೇಶಿ ರಾಷ್ಟ್ರದ ನೆರವನ್ನು ನಯವಾಗಿ ನಿರಾಕರಿಸಿದೆ. ನೆರವಿಗೆ ಮುಂದಾಗಿರುವ ವಿದೇಶಿ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸಿರುವ ಕೇಂದ್ರ ಸರಕಾರ ಪ್ರಾಕೃತಿಕ ವಿಕೋಪ ನಿರ್ವಹಿಸುವ ಸಾಮಥ್ಯ ತನಗಿದೆ. ಹೀಗಾಗಿ ವಿದೇಶಿ ರಾಷ್ಟ್ರಗಳ ನೆರವಿನ ಅಗತ್ಯವಿಲ್ಲ ಎಂದು ಹೇಳಿದೆ.
2004ರಿಂದ ಭಾರತ ಪ್ರಾಕೃತಿಕ ವಿಕೋಪದ ಸಂರ್ಭದಲ್ಲಿ ಬೇರ್ಯಾವುದೇ ರಾಷ್ಟ್ರ ಅಥವಾ ಬಹುರಾಷ್ಟ್ರೀಯ ಸಂಸ್ಥೆಯಿಂದ ನೆರವನ್ನು ಪಡೆದಿಲ್ಲ. ವಿದೇಶಿ ನೆರವನ್ನು ತಿರಸ್ಕರಿಸುವುದು ಕೇಂದ್ರದ ಅಂತಿಮ ನಿಲುವಲ್ಲ. ಅಗತ್ಯವಿದ್ದಾಗ ನೆರವು ಪಡೆದುಕೊಳ್ಳಲು ಮುಂದಾಗಬಹುದು.







