ರಾಜಕೀಯ ಲಾಭಕ್ಕಾಗಿ ವಾಜಪೇಯಿ ಹೆಸರು ಬಳಸುತ್ತಿರುವ ಬಿಜೆಪಿ: ಅಟಲ್ ಸೋದರಸೊಸೆ ಆರೋಪ
“4 ವರ್ಷಗಳಲ್ಲಿ ಇವರಿಗೆ ವಾಜಪೇಯಿಯ ನೆನಪೇ ಆಗಿಲ್ಲ”

ಹೊಸದಿಲ್ಲಿ, ಆ.23: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸಲು ಬಿಜೆಪಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನು ಬಳಸುತ್ತಿದೆ ಎಂದು ವಾಜಪೇಯಿಯವರ ಸೋದರ ಸೊಸೆ ಕರುಣಾ ಶುಕ್ಲಾ ಆರೋಪಿಸಿದ್ದಾರೆ.
ಖಾಸಗಿ ಚಾನೆಲ್ ನ್ಯೂಸ್ 18 ಜೊತೆ ಮಾತನಾಡಿದ ಅವರು, “ಬಿಜೆಪಿಯು ಸ್ವಾರ್ಥಿಯಾಗಿದೆ ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. 2019ರ ಚುನಾವಣೆಗಾಗಿ ಅವರು ಇದನ್ನು ಮಾಡುತ್ತಿದ್ದಾರೆ. ವಾಜಪೇಯಿ ಬದುಕಿದ್ದಾಗಲೂ ಬಿಜೆಪಿ ಅವರ ಹೆಸರಿನಿಂದ ಲಾಭ ಗಳಿಸಿತು. ಇದೀಗ ಅವರು ಮೃತಪಟ್ಟ ನಂತರ ವಾಜಪೇಯಿ ಹೆಸರನ್ನು ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ” ಎಂದವರು ಆರೋಪಿಸಿದರು.
“ವಾಜಪೇಯಿ ಸಾವನ್ನು ರಾಜಕೀಯಗೊಳಿಸುವ ಬಿಜೆಪಿಗೆ ಈ ವಿಚಾರದಲ್ಲಿ ನಾಚಿಕೆಯೇ ಇಲ್ಲ ಎಂದ ಅವರು, ಕಳೆದ ನಾಲ್ಕು ವರ್ಷಗಳಿಂದ ಮೋದಿಯವರು ಕೇಂದ್ರದಲ್ಲಿ ಮತ್ತು ಛತ್ತಿಸ್ ಗಢದಲ್ಲಿ ರಮಣ್ ಸಿಂಗ್ ಅಧಿಕಾರದಲ್ಲಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ರಮಣ್ ಸಿಂಗ್ ರಿಗಾಗಲೀ, ಅವರ ಕ್ಯಾಬಿನೆಟ್ ಗಾಗಲೀ, ವಾಜಪೇಯಿಯವರ ನೆನಪೇ ಆಗಿಲ್ಲ. ಜನರಿಗೆ ಇವರ ಬಗ್ಗೆ ತಿಳಿದಿದೆ ಎಂದರು.





