ಕೇರಳ ಪ್ರವಾಹ: ಬಕ್ರೀದ್ ಆಚರಣೆಗೆ ಮನೆಯೇ ಇಲ್ಲದೆ ನಿರಾಶ್ರಿತರ ಶಿಬಿರದಲ್ಲೇ ಉಳಿದ ಮೈಮೂನಾ
ದುಃಖದ ನಡುವೆ ಹಬ್ಬ ಆಚರಣೆ

ಕೃಪೆ: madhyamam.com
ಕಲ್ಲಿಕೋಟೆ, ಆ.23: ನಾಡಿನಾದ್ಯಂತ ಬಕ್ರೀದ್ ಆಚರಣೆ ನಡೆಯುತ್ತಿದ್ದರೆ ಇಲ್ಲಿನ ಹ್ಯುಮಾನಿಟಿ ಲೈಫ್ ಕೇರ್ ಹೋಮ್ನಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಉಳಿದುಕೊಂಡಿರುವ ಮೈಮೂನಾರಿಗೆ ಹಬ್ಬದ ಸಂಭ್ರಮವೇ ಇರಲಿಲ್ಲ. ನಿರಾಶ್ರಿತ ಶಿಬಿರದಿಂದ ಎಲ್ಲರೂ ಅವರವರ ಮನೆಗೆ ಹೋಗಿದ್ದರೆ ಮೈಮೂನಾರಿಗೆ ಮಾತ್ರ ಮನೆಯೇ ಇಲ್ಲ.
ತಾಮರಶ್ಸೇರಿಯ ಸಮೀಪದ ಚಮಲ್ ಎಂಬಲ್ಲಿ ಮೈಮೂನಾರ ಮನೆಯಿತ್ತು. ಅವರ 22 ವರ್ಷದ ಪುತ್ರ ಶಫೀಕ್ ಶೇ. 70ರಷ್ಟು ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಕಿರಿಯ ಪುತ್ರ ಶರೀಫ್ ಹತ್ತನೆ ತರಗತಿಗೆ ಶಾಲೆ ಕಲಿಯುವುದು ಬಿಟ್ಟು ಕೂಲಿಕೆಲಸ ಮಾಡುತ್ತಿದ್ದಾನೆ. ಮನೆ ಕಳೆದುಕೊಂಡ ಈ ಕುಟುಂಬ ಈ ಬಾರಿ ನಿರಾಶ್ರಿತರ ಶಿಬಿರದಲ್ಲೇ ಬಕ್ರೀದ್ ಆಚರಿಸುವಂತಾಗಿದೆ.
“ಕಳೆದ ಗುರುವಾರ ಬೆಳಗ್ಗೆ ಮನೆಯ ಸಮೀಪದ ತೊರೆಯಿಂದ ನೀರು ಮನೆಗೆ ನುಗ್ಗಿತ್ತು. ಮನೆಯ ಬಳಿಯಿದ್ದ ಮರ ಬಿದ್ದು ಮನೆ ಕುಸಿಯಿತು. ನೆರೆ ಬರುವ ಮುನ್ನಾ ದಿನ ಹಿರಿಯ ಪುತ್ರ ಸಲೀಂ, ಪತ್ನಿ ಜಿಸ್ನಾ ಮತ್ತು ಮಕ್ಕಳು, ಜಿಸ್ನಾರ ತವರು ಮನೆಗೆ ಹೋಗಿದ್ದರು. ಬೆಳ್ಳಂಬೆಳಗ್ಗೆ ನೆರೆಯ ಮನೆಯವರು ಎಚ್ಚರಿಸಿದ್ದರಿಂದ ನಾವೆಲ್ಲ ನೀರುಪಾಲಾಗದೆ ಉಳಿದುಕೊಂಡೆವು” ಎಂದು ಮೈಮೂನಾ ವಿವರಿಸುತ್ತಾರೆ. ಲೈಫ್ ಕೇರ್ ಹೋಂನಲ್ಲಿದ್ದವರೆಲ್ಲ ನೆರೆ ಇಳಿದ ಕಾರಣ ಬಕ್ರೀದ್, ಓಣಂ ಆಚರಣೆ ಎಂದು ಅವರವರ ಮನೆಗೆ ತೆರಳುತ್ತಿದ್ದರೆ, ಮೈಮೂನಾ ಮತ್ತು ಅವರ ಮಕ್ಕಳು ಎಲ್ಲಿಗೂ ಹೋಗಲಾಗದೆ ಲೈಫ್ಕೇರ್ ಹೋಂನಲ್ಲಿಯೇ ಉಳಿದುಕೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ 54 ವರ್ಷದ ಮೈಮೂನಾರನ್ನು ಅವರ ಪತಿ ತೊರೆದು ಹೋಗಿದ್ದು, ಆ ಬಳಿಕ ಮನೆ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದಾರೆ. ಮೈಮೂನಾರದ್ದು ತೀರ ಬಡ ಕುಟುಂಬವಾಗಿದ್ದು, ಇನ್ನೊಂದೆಡೆ ಅಸ್ವಸ್ಥ ಪುತ್ರನನ್ನೂ ಸಾಕಬೇಕಾಗಿದೆ. ಆಧಾರವಾಗಿದ್ದ ಮನೆಯನ್ನೂ ಕುಟುಂಬ ಕಳೆದು ಕೊಂಡಿದ್ದು ಈ ದುಃಖದ ನಡುವೆ ಬಕ್ರೀದ್ ಆಚರಿಸಿದ್ದಾರೆ.







