ಡೆತ್ ನೋಟ್ ಬರೆದಿಟ್ಟು ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮುಖ್ಯಶಿಕ್ಷಕ

ಹರಪನಹಳ್ಳಿ,ಆ.23: ಮುಖ್ಯಶಿಕ್ಷಕರೊಬ್ಬರು ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದು ನಂತರ ಶಾಲೆಯಲ್ಲಿಯೇ ನೇಣಿಗೆ ಶರಣಾದ ಘಟನೆ ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದ ರೇಣುಕಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರವಾರ ಬೆಳಗ್ಗೆ ನಡೆದಿದೆ.
ಜಿ. ಮಲ್ಲೇಶಪ್ಪ (56) ನೇಣಿಗೆ ಶರಣಾದ ಶಿಕ್ಷಕ. ಕಮ್ಮತ್ತಹಳ್ಳಿ ಗ್ರಾಮದ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿರುವ ಮಲ್ಲೇಶಪ್ಪ ಎಂದಿನಂತೆ ಎಲ್ಲರಿಗಿಂತ ಮುಂಚಿತವಾಗಿ ಶಾಲೆಗೆ ಬಂದಿದ್ದಾರೆ. ನಂತರ ಸುದೀರ್ಘ ನಾಲ್ಕು ಪುಟಗಳ ಪತ್ರ ಬರೆದಿಟ್ಟು ಶಾಲೆಯ ಕೊಠಡಿಯಲ್ಲಿಯೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಬಳಿಕ ಶಾಲೆಗೆ ಬಂದ ಶಿಕ್ಷಕರು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅರಸಿಕೆರೆ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





