ಖಾಸಗಿ ಔಷಧ ವ್ಯಾಪಾರಿಗಳಿಗೆ ಒಕ್ಸಿಟೊಸಿನ್ ಮಾರಲು ಕೇಂದ್ರದಿಂದ ಅನುಮತಿ
ಹೊಸದಿಲ್ಲಿ, ಆ.23: ಒಕ್ಸಿಟೊಸಿನ್ ಹಾರ್ಮೊನ್‌ಗಳ ಮಾರಾಟದ ಮೇಲೆ ಈ ಹಿಂದೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಿರುವ ಆರೋಗ್ಯ ಸಚಿವಾಲಯ ಸೆಪ್ಟಂಬರ್ ಒಂದರಿಂದ ಖಾಸಗಿ ಚಿಲ್ಲರೆ ಔಷಧಿ ವ್ಯಾಪಾರಿಗಳು ಕೂಡಾ ಈ ಹಾರ್ಮೊನ್ ಮಾರಾಟ ಮಾಡಲು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎಪ್ರಿಲ್ 27ರಂದು ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯಲ್ಲಿ ಜುಲೈ ಒಂದರಿಂದ ಖಾಸಗಿ ಔಷಧ ವ್ಯಾಪಾರಿಗಳು ಒಕ್ಸಿಟೊಸಿನ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮತ್ತು ಕೇವಲ ಸರಕಾರಿ ಆಸ್ಪತ್ರೆಗಳಲ್ಲಿ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ಈ ಹಾರ್ಮೊನ್‌ಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿತ್ತು. ನಂತರ ಈ ನಿಷೇಧವನ್ನು ಅನಷ್ಠಾನಗೊಳಿಸುವುದನ್ನು ಸೆಪ್ಟಂಬರ್ ಒಂದಕ್ಕೆ ಮುಂದೂಡಿತ್ತು. ಇದೀಗ ಎಲ್ಲ ಖಾಸಗಿ ಔಷಧಿ ಮಾರಾಟ ಮಳಿಗೆಗಳಲ್ಲಿ ಒಕ್ಸಿಟೊಸಿನ್ ಮಾರಾಟ ಮಾಡಬಹುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಗೃಹಬಳಕೆಯಲ್ಲಿ ಉಪಯೋಗಿಸಲಾಗುವ ಒಕ್ಸಿಟೊಸಿನ್ ಉತ್ಪಾದನೆಯನ್ನು ಕೇವಲ ಒಂದು ಸಾರ್ವಜನಿಕ ಸ್ವಾಮ್ಯದ ಕಂಪೆನಿ ತಯಾರಿಸಬಹುದು ಎಂದು ಸರಕಾರ ತಿಳಿಸಿದೆ. ಹಾಗಾಗಿ ಸೆಪ್ಟಂಬರ್ ಒಂದರಿಂದ ರಾಜ್ಯದಲ್ಲಿರುವ ಕರ್ನಾಟಕ ಆ್ಯಂಟಿಬಯೋಟಿಕ್ಸ್ ಪ್ರೈ.ಲಿ.,(ಕೆಎಪಿಎಲ್) ಒಕ್ಸಿಟೊಸಿನ್ ಉತ್ಪಾದನೆ ಮತ್ತು ಹಂಚಿಕೆ ಮಾಡುವ ಏಕೈಕ ಕಂಪೆನಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಕ್ಸಿಟೊಸಿನ್ ಒಂದು ನೈಸರ್ಗಿಕ ಹಾರ್ಮೋನ್ ಆಗಿದ್ದು ಹೆರಿಗೆಯ ಸಮಯದಲ್ಲಿ ಗರ್ಭಕೋಶ ಸಂಕುಚಿತಗೊಳ್ಳಲು ಮತ್ತು ಬಾಣಂತಿಯರು ನವಜಾತ ಶಿಶುವಿಗೆ ಹಾಲುಣಿಸುವಲ್ಲಿ ನೆರವಾಗುತ್ತದೆ.
ಆದರೆ ಈ ಹಾರ್ಮೋನ್‌ಗಳನ್ನು ಡೈರಿ ಕೈಗಾರಿಕೆಯಲ್ಲಿ ಅಕ್ರಮ ಕೆಲಸಗಳಿಗಾಗಿ ಬಳಸಲಾಗುತ್ತಿದೆ. ಈ ಹಾರ್ಮೊನ್‌ಗಳನ್ನು ಜಾನುವಾರುಗಳಿಗೆ ಚುಚ್ಚುವ ಮೂಲಕ ರೈತರು ತಮಗೆ ಬೇಕಾದ ಸಮಯದಲ್ಲಿ ಹಾಲು ಬಿಡುಗಡೆಯಾಗುವಂತೆ ಮಾಡುತ್ತಾರೆ. ಜೊತೆಗೆ ಈ ಹಾರ್ಮೋನ್‌ನನ್ನು ಕುಂಬಳಕಾಯಿ, ಕಲ್ಲಂಗಡಿ ಹಣ್ಣು, ಬದನೆ, ಸೌತೆಕಾಯಿ ಹಾಗೂ ಇತರ ಅನೇಕ ತರಕಾರಿಗಳ ಗಾತ್ರವನ್ನು ಹೆಚ್ಚಿಸಲೂ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರವು ಈಗಾಗಲೇ ಒಕ್ಸಿಟೊಸಿನ್‌ನ ಆಮದಿನ ಮೇಲೆ ನಿಷೇಧ ಹೇರಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.







