ಗುಂಪು ಹತ್ಯೆಗಳಿಗೆ ನಿರುದ್ಯೋಗ ಕಾರಣ: ರಾಹುಲ್ ಗಾಂಧಿ

ಹೊಸದಿಲ್ಲಿ, ಆ.23: ನಿರುದ್ಯೋಗ, ನೋಟು ರದ್ದತಿಯಿಂದ ಸಣ್ಣ ವ್ಯಾಪಾರ ನಾಶವಾಗಿರುವುದು ಹಾಗೂ ಅಧಿಕಾರದಲ್ಲಿರುವ ಬಿಜೆಪಿ ಜಿಎಸ್‌ಟಿಯನ್ನು ಅಸಮರ್ಪಕವಾಗಿ ಜಾರಿಗೊಳಿಸಿರುವುದು ಭಾರತದಲ್ಲಿ ಗುಂಪು ಹಲ್ಲೆಯಿಂದ ಹತ್ಯೆ ಘಟನೆಗಳು ಹೆಚ್ಚಲು ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ಲೇಷಿಸಿದ್ದಾರೆ.
ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಅಭಿವೃದ್ಧಿ ಪ್ರಕ್ರಿಯೆಯಿಂದ
ಆದಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಬಿಜೆಪಿ ಹೊರಗಿರಿಸುತ್ತಿದೆ ಎಂದು ಆರೋಪಿಸಿದರು. ನೀವು ಅವರಿಗೆ ಅವಕಾಶ ನೀಡದಿದ್ದರೆ ಇತರರು ನೀಡುತ್ತಾರೆ. ಐಸಿಸ್‌ನಂತಹ ಸಂಘಟನೆಗಳು ಅವರನ್ನು ಸೆಳೆದುಕೊಳ್ಳಬಹುದು ಎಂದರು.
ಜಾಗತಿಕವಾಗಿ ನಡೆಯುತ್ತಿರುವ ಘಟನೆಗಳಿಂದ ಜನತೆಗೆ ರಕ್ಷಣೆ ಬೇಕಿದೆ. ಆದರೆ ಇಂತಹ ರಕ್ಷಣೆಗಳನ್ನು ಭಾರತದಲ್ಲಿ ಈಗ ಅಧಿಕಾರದಲ್ಲಿರುವ ಸರಕಾರ ಕಿತ್ತುಹಾಕಿದೆ. ನೋಟು ರದ್ದತಿ ಹಾಗೂ ಜಿಎಸ್‌ಟಿಯ ಅಸಮರ್ಪಕ ಅನುಷ್ಟಾನದ ಕಾರಣದಿಂದ ಹುಟ್ಟುವ ಆಕ್ರೋಶ ಗುಂಪು ಹಲ್ಲೆ ಮತ್ತು ಹತ್ಯೆಯಂತಹ ಘಟನೆಗಳಿಗೆ ಕಾರಣವಾಗುತ್ತದೆ. ಗಣ್ಯ ವ್ಯಕ್ತಿಗಳಿಗೆ ದೊರಕುತ್ತಿರುವ ಸೌಲಭ್ಯ ಆದಿವಾಸಿಗಳು, ಬಡ ರೈತರು, ಕೆಳವರ್ಗದ ಜನರು, ಅಲ್ಪಸಂಖ್ಯಾತರಿಗೆ ದೊರಕಬಾರದು ಎಂಬುದು ಬಿಜೆಪಿ ಸರಕಾರದ ನಿಲುವಾಗಿದೆ ಎಂದು ರಾಹುಲ್ ಹೇಳಿದರು.
ಕೆಲ ವರ್ಷದ ಹಿಂದೆ ಪ್ರಧಾನಿ ಮೋದಿ ಭಾರತೀಯ ಅರ್ಥವ್ಯವಸ್ಥೆಯನ್ನು ಅನಾಣ್ಯೀಕರಿಸಿ ಸಣ್ಣ ಮತ್ತು ಮಧ್ಯಮ ವ್ಯಾಪಾರದ ಹಣದ ಹರಿವನ್ನು ನಿಲ್ಲಿಸುವ ಮೂಲಕ ಈ ಕ್ಷೇತ್ರವನ್ನು ನಾಶಗೊಳಿಸಿದರು. ಜಿಎಸ್‌ಟಿಯ ಕಳಪೆ ಅನುಷ್ಠಾನ ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿತು ಎಂದು ರಾಹುಲ್ ಹೇಳಿದ್ದಾರೆ.







