ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಏಕರಂದ್ರ ಶಸ್ತ್ರಚಿಕಿತ್ಸೆ

ಬೆಂಗಳೂರು, ಆ.23: ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಗೆ ಏಕರಂದ್ರ ಶಸ್ತ್ರಚಿಕಿತ್ಸೆಯನ್ನು ನಾರಾಯಣ ಹೆಲ್ತ್ ಸಿಟಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಶ್ರೀನಿವಾಸ್(47) ಶ್ವಾಸಕೋಶದ ಕ್ಯಾನ್ಸರ್ ಶಸ್ತ್ರಚಿಕತ್ಸೆಗೆ ಒಳಗಾದ ರೈತರಾಗಿದ್ದಾರೆ. ಇವರಿಗೆ ಆರಂಭಿಕ ಹಂತದಲ್ಲಿ ನಿಯಮಿತವಾಗಿ ಕೆಮ್ಮು ಇದ್ದು, ಆಗಾಗ್ಗೆ ರೋಗಿಯು ರಕ್ತವನ್ನು ಕಾರಿಕೊಳ್ಳುತ್ತಿದ್ದರು. ಪರಿಸ್ಥಿತಿ ಗಂಭೀರವಾದಾಗ ಅವರು ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಮೆಡಿಕಲ್ ಸೆಂಟರ್‌ಗೆ ಬಂದರು. ಕೇಂದ್ರದಲ್ಲಿನ ಥೊರಾಸಿಕ್ ಸರ್ಜನ್‌ಗಳಾದ ಡಾ.ವಿಜಯ್ ಮತ್ತು ಡಾ.ಶ್ರೀಕೃಷ್ಣ ನೇತೃತ್ವದ ವೈದ್ಯರ ತಂಡವು ರೋಗಿಯ ಪರಿಸ್ಥಿತಿಯನ್ನು ಪೂರ್ಣವಾಗಿ ಗಮನಿಸಿ, ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿತು. ಅವರಿಗೆ ಸಿಂಗಲ್ ಹೋಲ್ ಸರ್ಜರಿ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗಿದೆ.
ಈ ಶಸ್ತ್ರಚಿಕಿತ್ಸೆಯ ಕುರಿತು ಮಜುಂದಾರ್ ಶಾ ಮೆಡಿಕಲ್ ಸೆಂಟರ್‌ನ ಕನ್ಸಲ್ಟಂಟ್ ಥೊರಾಸಿಕ್ ಸರ್ಜನ್ ಡಾ.ವಿಜಯ್ ಮಾತನಾಡಿ, ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗಂಭೀರ ಸ್ವರೂಪದ ಕಾಯಿಲೆಯಾಗಿದ್ದು, ಭಾರತದಲ್ಲಿ ವಾರ್ಷಿಕ ಸರಾಸರಿ 70,000 ಜನರು ಈ ಕಾಯಿಲೆಗೆ ತುತ್ತಾಗುತ್ತಾರೆ. ಇದು, ವಿಶ್ವ ಆರೋಗ್ಯ ಸಂಘಟನೆಯ ಗ್ಲೊಬೊಕಾನ್ 2012ರ ಅನ್ವಯ ಮಹಿಳೆ, ಪುರುಷರಲ್ಲಿ ಸಾವಿಗೆ ಕಾರಣವಾಗುವ ಪ್ರಮುಖ ಕಾಯಿಲೆಯಾಗಿದೆ ಎಂದರು.
ಸಿಂಗಲ್ ಕೀ ಹೋಲ್ ಸರ್ಜರಿಯು ಒಂದು ಸವಾಲಿನದಾಗಿದೆ. ಇದಕ್ಕೆ ಸುದೀರ್ಘ ಅವಧಿಯ ಶಸ್ತ್ರಚಿಕಿತ್ಸೆ ನಂತರದ ಆರೈಕೆ ಬೇಕಾಗಿಲ್ಲ. ಚಿಕಿತ್ಸೆ ಮೂರು ದಿನದ ತರುವಾಯ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದು ಸಾಧ್ಯವಿದೆ. ಒಂದು ವಾರದ ಅವಧಿಯಲ್ಲಿಯೇ ಸಹಜ ಬದುಕಿಗೆ ರೋಗಿಯು ಮರಳಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







