ಸ್ಟರ್ಲೈಟ್ ತಾಮ್ರ ಸ್ಥಾವರ ಪ್ರಕರಣ: ಸಮಿತಿ ಅಧ್ಯಕ್ಷರಾಗಿ ನ್ಯಾ. ವಝೀಫ್‌ಧಾರ್ ನೇಮಕ
ಹೊಸದಿಲ್ಲಿ, ಆ.23: ಟ್ಯುಟಿಕಾರಿನ್‌ನಲ್ಲಿರುವ ತನ್ನ ಸ್ಟರ್ಲೈಟ್ ತಾಮ್ರ ಸ್ಥಾವರವನ್ನು ಮುಚ್ಚುವ ಆದೇಶವನ್ನು ಪ್ರಶ್ನಿಸಿ ವೇದಾಂತ ಸಂಸ್ಥೆ ಸಲ್ಲಿಸಿರುವ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಳ್ಳಲು ರೂಪಿಸಲಾಗಿರುವ ಮೂವರು ಸದಸ್ಯರ ಸಮಿತಿಗೆ ಅಧ್ಯಕ್ಷರನ್ನಾಗಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಎಸ್.ಜೆ.ವಝೀಫ್‌ಧಾರ್ ರನ್ನು ನೇಮಿಸಲಾಗಿದೆ ಎಂದು ಎನ್‌ಜಿಟಿ ತಿಳಿಸಿದೆ.
ಕೇಂದ್ರ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರತಿನಿಧಿಗಳು ಸಮಿತಿಯ ಸದಸ್ಯರಾಗಿರುತ್ತಾರೆ. ತಾಮ್ರ ಸ್ಥಾವರದ ಪ್ರದೇಶಕ್ಕೆ ಈ ಸಮಿತಿ ಭೇಟಿ ನೀಡಿ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ) ತಿಳಿಸಿದೆ. ಜೊತೆಗೆ, ಸ್ಟರ್ಲೈಟ್ ತಾಮ್ರದ ಸ್ಥಾವರವು 1,300 ಮಂದಿಗೆ ಉದ್ಯೋಗ ನೀಡುತ್ತಿದೆ ಮತ್ತು ದೇಶದ ತಾಮ್ರ ಉತ್ಪಾದನೆಗೆ ಈ ಸ್ಥಾವರ ಗಣನೀಯ ಪ್ರಮಾಣದ ಕೊಡುಗೆ ನೀಡುತ್ತಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಎನ್‌ಜಿಟಿ ತಿಳಿಸಿದೆ.
ಎರಡು ವಾರಗಳೊಳಗೆ ಕಾರ್ಯ ಆರಂಭಿಸಿ ಆರು ವಾರದೊಳಗೆ ನಿರ್ಧಾರಕ್ಕೆ ಬರಬೇಕು ಎಂದು ಸಮಿತಿಗೆ ಸೂಚಿಸಲಾಗಿದೆ . ಈ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು . ಸ್ಥಳಕ್ಕೆ ಭೇಟಿ ನೀಡಲಿರುವ ಸಮಿತಿಗೆ ಜಿಲ್ಲಾಡಳಿತ ಭದ್ರತೆ ಸೇರಿದಂತೆ ಎಲ್ಲಾ ಸಹಕಾರ ನೀಡಲಿದೆ ಎಂದು ಎನ್‌ಜಿಟಿ ತಿಳಿಸಿದೆ.





