ಮಹಿಳೆಯರು ಸಾಧನೆಯ ಮನೋಬಲ ಬೆಳೆಸಿಕೊಳ್ಳಿ: ಡಾ.ಹೆಬ್ಬಾರ್

ಮಣಿಪಾಲ, ಆ.23: ಮಹಿಳೆಯರು ಆತ್ಮವಿಶ್ವಾಸ, ಇಚ್ಛಾಶಕ್ತಿಯ ಜೊತೆಗೆ ಸಾಧನೆ ಮಾಡುವ ಮನೋಬಲವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರಿನ ಸೈಂಟ್ ಆಗ್ನೇಷ್ ಕಾಲೇಜಿನ ಕೋಶ (ಐಕ್ಯೂಎಸಿ) ವಿಭಾಗದ ನಿರ್ದೇಶಕಿ ಡಾ.ಮಾಲಿನಿ ಎನ್. ಹೆಬ್ಬಾರ್ ಹೇಳಿದ್ದಾರೆ.
ಮಣಿಪಾಲ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ಮಹಿಳಾ ಉದ್ಯಮಶೀಲತೆ’ ಎಂಬ ವಿಷಯದ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾಧನೆ ಮಾಡುವುದರಲ್ಲಿ ಹಳ್ಳಿ, ನಗರ ಪ್ರದೇಶವೆಂಬ ವ್ಯತ್ಯಾಸ ಬರಲ್ಲ. ಸಾಧನೆ ಮಾಡಲು ಹಳ್ಳಿಯಲ್ಲೂ ತುಂಬಾ ಅವಕಾಶಗಳಿವೆ. ಅದನ್ನು ಮಹಿಳೆ ಯರು ಸದ್ಭಳಿಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಇದು ಪುರುಷ ಪ್ರಧಾನ ಸಮಾಜ. ಇಲ್ಲಿ ಮಹಿಳೆಯರಿಗೆ ಯಾವುದೇ ಸಾಧನೆ ಮಾಡಲು ಆಗಲ್ಲ ಎಂಬ ಮನೋಭಾವವನ್ನು ತಳೆಯಲಾಗಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ. ಮಹಿಳೆಯರು ಏನನ್ನಾದರೂ ಸಾಧಿಸಬಲ್ಲರು ಎಂದು ಡಾ.ಹೆಬ್ಬಾರ್ ತಿಳಿಸಿದರು.
ಮಹಿಳೆಯರು ಶಿಕ್ಷಣ ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು. ವಿದ್ಯೆಯಿಂದ ಬಹಳ ಪ್ರಯೋಜನವಿದೆ. ಬದುಕಿನಲ್ಲಿ ಯಶಸ್ಸು ಪಡೆಯಲು ಇದು ಮೊದಲ ಮೆಟ್ಟಿಲು ಕೂಡ ಆಗಿದೆ. ಹಿಂದೆ ಮಹಿಳಾ ಸಬಲೀಕರಣಕ್ಕೆ ಅಷ್ಟು ಸೂಕ್ತ ವಾತಾವರಣ ಇರಲಿಲ್ಲ. ಆದರೆ ಈಗ ಅದಕ್ಕೆ ಸಾಕಷ್ಟು ಅವಕಾಶಗಳು ತೆರೆದುಕೊಂಡಿದೆ. ಮಹಿಳೆಯರು ಸರಕಾರದ ಮೇಕಿಂಗ್ ಇಂಡಿಯಾ, ಕೌಶಲಾಭಿವೃದ್ಧಿಯಂತಹ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸ್ವ ಉದ್ಯೋಗಗಳನ್ನು ಕೈಗೊಳ್ಳುವ ಮೂಲಕ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಪಿ.ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ದ್ದರು. ಬೆಂಗಳೂರಿನ ವಿ.ವಿ.ಎನ್. ಪದವಿ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕಿ ಪ್ರೊ. ಪ್ರಸನ್ನಾ ಉಡುಪಿಕಾರ್, ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಡಾ. ಆಶಾಲತಾ ಸುವರ್ಣ, ಪವರ್ ಗ್ರೂಪ್ ಅಧ್ಯಕ್ಷೆ ಡಾ. ಗಾಯತ್ರಿ, ಉಡುಪಿ ಇನ್ನರ್ ವಿಲ್ ಕ್ಲಬ್‌ನ ಅಧ್ಯಕ್ಷೆ ವಿಜಯಲಕ್ಷ್ಮೀ ಬಲ್ಲಾಳ್, ಕಾಲೇಜಿನ ಪ್ರಾಂಶುಪಾಲೆ ಟಿ. ರಾಧಿಕಾ ಪೈ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಶ್ರೀನಿವಾಸ್ ವೈದ್ಯ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸಚ್ಚೇಂದ್ರ ಪಣಿಯೂರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಶೋಭಾ ಪ್ರಭು ಸ್ವಾಗತಿಸಿ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಸುಷ್ಮಾ ಎ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ವಿಕಾಸ್ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







