ಮುಂಬೈ ಸ್ಫೋಟದ ಬಗ್ಗೆ ಮಾಹಿತಿ ವಿಚಾರ: ಅರ್ಜಿದಾರನಿಗೆ 5 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು, ಆ.23: ಮುಂಬೈ ಸ್ಫೋಟಕ್ಕೂ ಮುನ್ನವೆ ನಾನು ಮುಂಜಾಗ್ರತಾ ಮಾಹಿತಿ ನೀಡಿದ್ದರೂ ಮಹಾರಾಷ್ಟ್ರ ಗೃಹ ಇಲಾಖೆಯು ಯಾವುದೆ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿಯೇ ಸಾವು ನೋವುಗಳು ಸಂಭವಿಸಿದ್ದು, ಗೃಹ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಲ್ಲದೆ, ಅರ್ಜಿದಾರರಿಗೆ 5 ಸಾವಿರ ದಂಡವನ್ನು ವಿಧಿಸಿ, ಈ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ಪಾವತಿಸಬೇಕೆಂದು ಹೈಕೋರ್ಟ್ ಸೂಚಿಸಿದೆ. ಅರ್ಜಿದಾರ ಟಿಡಿಆರ್ ಹರಿಶ್ಚಂದ್ರಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಖುದ್ದು ವಾದ ಮಂಡಿಸಿದ ಹರಿಶ್ಚಂದ್ರಗೌಡ, ಮಹಾರಾಷ್ಟ್ರ ಗೃಹ ಇಲಾಖೆಗೆ ಮತ್ತು ರಾಜಭವನಕ್ಕೆ ಬರೆದ ಮುಂಜಾಗೃತ ಪತ್ರವನ್ನು ನ್ಯಾಯಪೀಠಕ್ಕೆ ನೀಡಿದರು. ನನ್ನ ಮಾತನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಲಿಲ್ಲ. ಇಲಾಖೆಯ ನಿರ್ಲಕ್ಷದಿಂದ ಸಾವು ನೋವುಗಳು ಸಂಭವಿಸಿದವು. ಹೀಗಾಗಿ, ಗೃಹ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆಗೆ ನಿರ್ದೇಶಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿತು. ಅರ್ಜಿದಾರರು ಮುಂದಿನ ದಿನಗಳಲ್ಲಿ ಅನಗತ್ಯ ಅಥವಾ ನೈಜ ಸಾಮಾಜಿಕ ಕಾಳಜಿ ಇಲ್ಲದ ಪಿಐಎಲ್‌ಗಳನ್ನು ಸಲ್ಲಿಸಬಾರದು ಎಂದು ನ್ಯಾಯಪೀಠವು ಅರ್ಜಿದಾರರಿಂದ ಮುಚ್ಚಳಿಕೆ ಬರೆಸಿಕೊಂಡಿದೆ.







