ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಅರ್ಜಿಗಳು !
ಬೆಂಗಳೂರು, ಆ.23: ರಾಜ್ಯಾದ್ಯಂತ ಸರಕಾರಿ ವಿಶ್ವವಿದ್ಯಾಲಯಗಳಲ್ಲಿನ ಸಿಂಡಿಕೇಟ್ ಸದಸ್ಯರಾಗಿ ನೇಮಕಕ್ಕಾಗಿ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ.
ಬಹಳ ಹಿಂದಿನಿಂದಲೂ ಒಂದು ಸರಕಾರದ ಅವಧಿ ಮುಗಿದ ಬಳಿಕ, ಮತ್ತೊಂದು ಸರಕಾರ ಚುನಾಯಿತವಾದ ನಂತರ ಹೊಸದಾಗಿ ಸಿಂಡಿಕೇಟ್‌ಗೆ ಸದಸ್ಯರನ್ನು ನೇಮಕ ಮಾಡುವ ಪದ್ದತಿ ಇದೆ. ಹೀಗಾಗಿ, ಹೊಸದಾಗಿ ರಚನೆಯಾಗಿರುವ ಮೈತ್ರಿ ಸರಕಾರ ಸಿಂಡಿಕೇಟ್‌ಗೆ ಸದಸ್ಯರನ್ನು ನೇಮಕ ಮಾಡಲಾಗುತ್ತದೆ ಎನ್ನುತ್ತಿದ್ದಂತೆ ಅಂದಾಜು ಮೂರು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ವಿವಿಧ 28 ಸರಕಾರಿ ವಿಶ್ವವಿದ್ಯಾಲಯಗಳಿದ್ದು, ಅದರಲ್ಲಿ ಪ್ರತಿಯೊಂದು ವಿವಿಗೆ ರಾಜ್ಯ ಸರಕಾರ 6 ಜನ ಮತ್ತು ರಾಜ್ಯಪಾಲರು 2 ರನ್ನು ನಾಮನಿರ್ದೇಶಿಸಲು ಅವಕಾಶವಿದೆ. ಒಟ್ಟಾರೆ ಎಲ್ಲ ವಿವಿಗಳಿಂದ 200 ಸ್ಥಾನಗಳು ಖಾಲಿ ಉಳಿದಿದ್ದು, ಮೈತ್ರಿ ಸರಕಾರಕ್ಕೆ 160 ಜನರನ್ನು ನೇಮಕ ಮಾಡಲು ಅವಕಾಶವಿದೆ. ಹೀಗಾಗಿ, ಉನ್ನತ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಸಚಿವರ ಕಚೇರಿಗೆ ಸದಸ್ಯ ಆಕಾಂಕ್ಷಿಗಳು ತೆರಳಿ ಸ್ವವಿವರ ಪತ್ರ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವು ಅಂಚೆ ಮೂಲಕ ಕಳಿಹಿಸಿಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿವಿಗಳಿಗೆ ಹೆಚ್ಚಿದ ಬೇಡಿಕೆ: ಸಿಂಡಿಕೇಟ್ ಸದಸ್ಯತ್ವಕ್ಕೆ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ಸಿಂಡಿಕೇಟ್ ಸದಸ್ಯತ್ವ ಸ್ಥಾನಕ್ಕೆ ಹೆಚ್ಚು ಬೇಡಿಕೆ ಇದೆ ಎನ್ನಲಾಗಿದೆ.
ಅರ್ಜಿ ಪರಿಶೀಲನೆ: ವಿವಿಧ ವಿವಿಗಳಲ್ಲಿನ ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಬಂದಿರುವ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಎಲ್ಲ ಅರ್ಜಿಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000 ರ ಪ್ರಕಾರ ನಿಯಮಗಳನ್ನು ಪಾಲಿಸಿದೆಯಾ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅರ್ಹರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.
ವಿವಿಗಳಲ್ಲಿ ಸಿಂಡಿಕೇಟ್‌ಗೆ ಉನ್ನತ ಅಧಿಕಾರವಿರುತ್ತದೆ. ವಿವಿ ವ್ಯಾಪ್ತಿಯಲ್ಲಿ ಯಾವುದೇ ಮುಖ್ಯವಾದ ನಿರ್ಣಯ ಕೈಗೊಳ್ಳಬೇಕಾದರೆ ಸಿಂಡಿಕೇಟ್ ಸಭೆ ಮುಂದಿಟ್ಟು ಅನುಮೋದನೆ ಪಡೆಯಬೇಕಾಗಿರುವುದು ಕಡ್ಡಾಯ. ಅಲ್ಲದೆ, ಸಿಂಡಿಕೇಟ್ ಸದಸ್ಯರೇ ಸ್ಥಳೀಯ ವಿಚಾರಣಾ ಸಮಿತಿ ಸದಸ್ಯರಾಗಿರುತ್ತಾರೆ. ಹೀಗಾಗಿ, ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಬೇಡಿಕೆ ಹೆಚ್ಚಾಗಿದೆ.







