ಕಬಡ್ಡಿ: ಭಾರತದ ಪುರುಷರ ತಂಡದ ಚಿನ್ನದ ಓಟಕ್ಕೆ ಇರಾನ್ ಕಡಿವಾಣ
ಸೆಮಿ ಫೈನಲ್‌ನಲ್ಲಿ 18-27 ಅಂತರದ ಆಘಾತಕಾರಿ ಸೋಲು

ಜಕಾರ್ತ, ಆ.23: ಏಳು ಬಾರಿಯ ಚಾಂಪಿಯನ್ ಭಾರತದ ಪುರುಷರ ಕಬಡ್ಡಿ ತಂಡ ಗುರುವಾರ ನಡೆದ ಏಶ್ಯನ್ ಗೇಮ್ಸ್‌ನ ಸೆಮಿ ಫೈನಲ್ ಹೋರಾಟದಲ್ಲಿ ಇರಾನ್ ವಿರುದ್ಧ ಆಘಾತಕಾರಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಮೊದಲ ಬಾರಿ ಫೈನಲ್‌ಗೆ ತಲುಪಲು ವಿಫಲವಾಗಿದ್ದು, ಗೇಮ್ಸ್‌ನಲ್ಲಿ ತಂಡದ ಚಿನ್ನದ ಓಟಕ್ಕೆ ಬ್ರೇಕ್ ಬಿದ್ದಿದೆ.
ಭಾರತ ಅಂತಿಮ-4ರ ಸುತ್ತಿನಲ್ಲಿ ಇರಾನ್ ವಿರುದ್ಧ 18-27 ಅಂತರದಿಂದ ಸೋಲುಂಡಿದೆ. 1990ರಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಕ್ರೀಡೆ ಸೇರ್ಪಡೆಯಾದ ಬಳಿಕ ಭಾರತ ಆಡಿರುವ ಎಲ್ಲ ಏಳು ಏಶ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿತ್ತು. ಇದೀಗ ಮೊದಲ ಬಾರಿ ಬಹುಕ್ರೀಡಾಕೂಟದಲ್ಲಿ ಕಳಪೆ ಪ್ರದರ್ಶನ ನೀಡಿದೆ.
ಭಾರತ ನೆರೆಯ ರಾಷ್ಟ್ರ ಪಾಕಿಸ್ತಾನದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಪಾಕ್ ತಂಡ ಕೂಡ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಮುಗ್ಗರಿಸಿದೆ.
ಮೊದಲಾರ್ಧದಲ್ಲಿ ಉಭಯ ತಂಡಗಳು ತೀವ್ರ ಹೋರಾಟ ನೀಡಿದ್ದವು. ದ್ವಿತೀಯಾರ್ಧದಲ್ಲಿ ಇರಾನ್ ಅಲ್ಪ ಮುನ್ನಡೆ ಪಡೆಯಲು ಶಕ್ತವಾಯಿತು. ಆಗ ಭಾರತ ಪಾಳಯದಲ್ಲಿ ನಡುಕ ಆರಂಭವಾಗಿತ್ತು. ಅಂಕ ಗಳಿಸಲು ಪರದಾಟ ನಡೆಸಲು ಆರಂಭಿಸಿತು. ಅಂಕ ಸಿಗದೇ ಹತಾಶಯಲ್ಲಿದ್ದ ಭಾರತ ವಿರುದ್ಧ ಇರಾನ್ ಸಂಪೂರ್ಣ ಮೇಲುಗೈ ಸಾಧಿಸಿತು. ಭಾರೀ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಹಿಡಿತ ಸಾಧಿಸಿತು.
ಇರಾನ್ ದ್ವಿತೀಯಾರ್ಧದಲ್ಲಿ ಒಟ್ಟು 18 ಅಂಕ ಗಳಿಸಿತು. ಇದರೊಂದಿಗೆ ಸತತ ಮೂರನೇ ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಫೈನಲ್‌ಗೆ ತಲುಪಿತು. ಕಳೆದ ಎರಡು ಆವೃತ್ತಿಯ ಗೇಮ್ಸ್‌ಗಳಲ್ಲಿ ಫೈನಲ್‌ನಲ್ಲಿ ಭಾರತಕ್ಕೆ ಸೋತಿದ್ದ ಇರಾನ್ ಬೆಳ್ಳಿ ಪದಕ ಜಯಿಸಿತ್ತು.
ಮಹಿಳಾ ಕಬಡ್ಡಿ ತಂಡ ಫೈನಲ್‌ಗೆ ಲಗ್ಗೆ
ಏಶ್ಯನ್ ಗೇಮ್ಸ್‌ನ ಸೆಮಿ ಫೈನಲ್‌ನಲ್ಲಿ ಚೈನೀಸ್ ತೈಪೆ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತದ ಮಹಿಳಾ ಕಬಡ್ಡಿ ತಂಡ ಸತತ ಮೂರನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಕಳೆದ ಎರಡು ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ಮಹಿಳಾ ತಂಡ ಅಂತಿಮ-4ರ ಪಂದ್ಯದಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿ ತೈಪೆ ವಿರುದ್ಧ 27-14 ಅಂತರದಿಂದ ಜಯ ದಾಖಲಿಸಿತು.
ಭಾರತದ ವನಿತೆಯರು 2012, 2013 ಹಾಗೂ 2014ರಲ್ಲಿ ಚಿನ್ನ ಜಯಿಸಿ ಹ್ಯಾಟ್ರಿಕ್ ನಿರ್ಮಿಸಿದ್ದರು. ಈ ಬಾರಿಯ ಗೇಮ್ಸ್ ಫೈನಲ್‌ನಲ್ಲಿ ಇರಾನ್ ಅಥವಾ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. ಮಹಿಳಾ ತಂಡ 2010ರ ಗೇಮ್ಸ್‌ನಲ್ಲಿ ಥಾಯ್ಲೆಂಡ್‌ನ್ನು 28-14 ರಿಂದ ಸೋಲಿಸಿ ಚಿನ್ನ ಜಯಿಸಿತ್ತು. ನಾಲ್ಕು ವರ್ಷಗಳ ಬಳಿಕ ಇರಾನ್ ತಂಡವನ್ನು 31-21 ಅಂತರದಿಂದ ಸೋಲಿಸಿ ತನ್ನ ಸಾಧನೆಯನ್ನು ಪುನರಾವರ್ತಿಸಿತ್ತು.
ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿ ಫೈನಲ್‌ಗೆ ಅರ್ಹತೆ ಪಡೆದಿತ್ತು.







