ಹನೂರು: ಸಂಭ್ರಮದ ಬಕ್ರೀದ್ ಆಚರಣೆ

ಹನೂರು,ಆ.23: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಮುಸ್ಲಿಮರು ಬುಧವಾರ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾಥನೆ ಸಲ್ಲಿಸುವುದರ ಮೂಲಕ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಹನೂರು ಸೇರಿದಂತೆ ಮಂಗಲ, ಕಣ್ಣೂರು, ಎಲ್ಲೇಮಾಳ, ಬಸಪ್ಪನದೊಡ್ಡಿ, ಅಜ್ಜೀಪುರ, ಚಿಗತಾಪುರ, ಕೌದಳ್ಳಿ, ಬಂಡಳ್ಳಿ, ಕುರುಬರದೊಡ್ಡಿ, ಒಡೆಯರಪಾಳ್ಯ, ದೊಡ್ಡಿಂದುವಾಡಿ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳ ಮುಸ್ಲಿಂ ಬಾಂಧವರು ಬೆಳಿಗ್ಗೆ 9.30ಕ್ಕೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾಥನೆಯನ್ನು ಸಲ್ಲಿಸಿದರು.
ಈ ವೇಳೆ ಧರ್ಮಗುರುಗಳು ಉಪನ್ಯಾಸ ನೀಡಿದರು. ನಂತರ ಮುಸ್ಲಿಮರು ಪರಸ್ಪರ ಅಪ್ಪಿಕೊಳ್ಳುವುದರ ಮೂಲಕ ಹಾಗೂ ಹಸ್ತಲಾಘವ ಮಾಡಿ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹನೂರು ಪಟ್ಟಣ: ಪಟ್ಟಣದ ಮುಸ್ಲಿಂ ಬಂಧುಗಳು ಸಮೀಪದ ಆರ್.ಎಸ್.ದೊಡ್ಡಿ ಬಳಿಯಿರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಈದ್ಗಾ ಮೈದಾನದಿಂದ ಸೆಸ್ಕಾಂ ಕಚೇರಿ ಮುಖ್ಯರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ರಸ್ತೆಯುದ್ದಕ್ಕೂ ಸಾಗಿದರು. ಈ ಸಂದರ್ಭದಲ್ಲಿ ಇತರ ಧರ್ಮದವರಿಗೂ ಕೂಡ ಬಕ್ರೀದ್ ಹಬ್ಬದ ಶುಭಾಶಯವನ್ನು ಕೋರಿದರು.







