ಕೊಡಗಿಗೆ ಪ್ರಧಾನಿ ಭೇಟಿಗೆ ಒತ್ತಾಯಿಸಿ ಆ.27ರಂದು ರಾಜಭವನ ಮುತ್ತಿಗೆ
ಬೆಂಗಳೂರು, ಆ.24: ಪ್ರವಾಹ ಪೀಡಿತ ಕೊಡಗಿಗೆ ಪ್ರಧಾನಿ ಮಂತ್ರಿಗಳು ಭೇಟಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆ.27ರಂದು ರಾಜ ಭವನ ಮುತ್ತಿಗೆ ಹಾಕಲು ಕನ್ನಡ ಒಕ್ಕೂಟ ನಿರ್ಧರಿಸಿದೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಕೇರಳಕ್ಕೆ ಮಾತ್ರ ಭೇಟಿ ನೀಡಿದ್ದಾರೆ. ಜೊತೆಗೆ ಅಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ನೆರವನ್ನು ಸಹ ಘೋಷಿಸಿದ್ದಾರೆ. ಆದರೆ, ಅದೇ ಪರಿಸ್ಥಿತಿ ಕರ್ನಾಟಕದ ಕೊಡಗಿನಲ್ಲಿ ಆಗಿದ್ದರೂ, ರಾಜ್ಯ ಭೇಟಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಆ.27ರ ಪ್ರತಿಭಟನೆಯ ನಂತರವೂ ಪ್ರಧಾನಿ ಮಂತ್ರಿಗಳು ರಾಜ್ಯಕ್ಕೆ ಆಗಮಿಸಿ ಈ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸಾ.ರಾ.ಗೋವಿಂದು, ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕೆ.ಆರ್.ಕುಮಾರ್, ಮಂಜುದೇವ್, ಗಿರೀಶ್‌ಗೌಡ ಸೇರಿದಂತೆ ಪ್ರಮುಖರಿದ್ದರು.





