ಗ್ರಾಮೀಣ ಪ್ರದೇಶದಲ್ಲಿನ ಶೋಷಣೆ ಬರಗೂರರಿಂದ ಹೊರ ಜಗತ್ತಿಗೆ ಪರಿಚಯ: ಡಾ.ಬಸವರಾಜ ಕಲ್ಗುಡಿ
ಬೆಂಗಳೂರು, ಆ.24: ಬರಗೂರು ರಾಮಚಂದ್ರಪ್ಪ ಅವರು ತಮ್ಮ ಸಾಹಿತ್ಯ ಕೃಷಿಯಲ್ಲಿ ಯಥೇಚ್ಛವಾಗಿ ಗ್ರಾಮೀಣ ಪ್ರದೇಶದಲ್ಲಿನ ಶೋಷಣೆಯನ್ನು ಹೊರ ಜಗತ್ತಿಗೆ ಪರಿಚಯಿಸಿಕೊಟ್ಟವರು. ಹೀಗಾಗಿಯೇ, ಅವರನ್ನು ಬಂಡಾಯ ಸಾಹಿತಿ, ಸೃಜನಶೀಲ ಸಾಹಿತಿ ಎಂಬ ಹೆಸರಿನಿಂದ ಗುರುತಿಸುತ್ತಾರೆ ಎಂದು ಸಾಹಿತಿ ಡಾ.ಬಸವರಾಜ ಕಲ್ಗುಡಿ ಹೇಳಿದ್ದಾರೆ.
ಶುಕ್ರವಾರ ಕಸಾಪದಲ್ಲಿ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಆಯೋಜಿಸಿದ್ದ ಡಾ.ಎ.ವಿ.ಲಕ್ಷ್ಮೀನಾರಾಯಣ ಅವರ ಬರಗೂರರ ಸಾಹಿತ್ಯ, ಸಿನಿಮಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬರಗೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧಿಕಾರದ ಜವಾಬ್ದಾರಿಯನ್ನು ತಿಳಿದಿದ್ದ ಬರಗೂರು ಅವರು ಅಧಿಕಾರ ಸಿಕ್ಕಾಗ ಬುಡಕಟ್ಟು ಜನಾಂಗ, ಗ್ರಾಮೀಣ ಪ್ರದೇಶದಲ್ಲಿನ ಶೋಷಣೆ, ಪ್ರತಿ ಜಿಲ್ಲಾ ಕೇಂದ್ರಕ್ಕೆ ಸಿನಿಮಾವನ್ನು ತೆಗೆದುಕೊಂಡು ಹೋಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಹೀಗಾಗಿ, ಅವರು ಸೃಜನಶೀಲ ಸಾಹಿತಿ ಎಂಬ ಹೆಸರಿನಿಂದ ಗುರುತಿಸುತ್ತಾರೆ ಎಂದು ಹೇಳಿದರು. ಸಾಹಿತಿ ಡಾ.ಎ.ವಿ.ಲಕ್ಷ್ಮೀನಾರಾಯಣ ಅವರು ಬರಗೂರರ ಸಾಹಿತ್ಯ, ಸಿನಿಮಾ ಸಾಹಿತ್ಯ ಕೃತಿಗಳನ್ನು ಉತ್ತಮವಾಗಿ ರಚಿಸಿದ್ದು, ಈ ಕೃತಿಗಳನ್ನು ಓದಿದರೆ ಗ್ರಾಮೀಣ ಪ್ರದೇಶ, ಸಿನಿಮಾ ಹಾಗೂ ಬರಗೂರರ ವ್ಯಕ್ತಿತ್ವ ಅರಿವಿಗೆ ಬರುತ್ತದೆ ಎಂದು ತಿಳಿಸಿದರು.
ಸಾಹಿತಿ ಭೈರಮಂಗಲ ರಾಮೇಗೌಡ ಮಾತನಾಡಿ, ಬರಗೂರು ಅವರು ತಾವು ಬರೆದ ಕಾವ್ಯ ಮತ್ತು ಕಥೆಗಳನ್ನೆ ಮುಂದಿಟ್ಟುಕೊಂಡು ಸಿನಿಮಾ ಕ್ಷೇತ್ರದಲ್ಲಿ ಹಲವು ಸಿನಿಮಾಗಳನ್ನು ತೆಗೆದು ಪ್ರಸಿದ್ಧಿಯನ್ನು ಪಡೆದವರು ಹಾಗೂ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಡಾ.ಎಚ್.ಎಲ್.ಪುಷ್ಪ, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಉಪಸ್ಥಿತರಿದ್ದರು.







