ಹನೂರು: ಪ್ರಗತಿಯಲ್ಲಿರುವ ತಟ್ಟೆಹಳ್ಳದ ಕಾಮಗಾರಿ ಪರಿಶೀಲನೆ

ಹನೂರು,ಆ.24: ತಟ್ಟೆಹಳ್ಳದಲ್ಲಿರುವ ಸಂಪೂರ್ಣ ಜಾಗವನ್ನು ಆಳತೆ ಮಾಡಿ ಅದಕ್ಕೆ ಗಡಿ ಗುರುತಿಸಿ ಒತ್ತುವರಿ ಜಾಗದ ತೆರವಿನ ನಂತರ ವಶಕ್ಕೆ ಪಡೆದು ತಡೆಗೋಡೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ರವಿಕುಮಾರ್ ಪಪಂ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂ. ಕಚೇರಿಗೆ ಆಗಮಿಸಿ ನಂತರ ಆಂಜನೇಯ ದೇವಸ್ಥಾನದ ಬಳಿ ತಟ್ಟೆಹಳ್ಳ ಪಟ್ಟಣದ ಇನ್ನಿತರ ಕಡೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಮಾಹಿತಿ ಪಡೆದು ಮಾತನಾಡಿದ ಅವರು ಈಗಾಗಲೇ ಪಟ್ಟಣದ ವಿವಿದೆಡೆಯಿಂದ ಬರುವ ಕಲುಷಿತ ನೀರು ಹೋಗಲು ತಡೆಗೋಡೆಗಳನ್ನು ನಿರ್ಮಿಸಲಾಗಿದ್ದು, ಅದರಂತೆ ಬೃಹತ್ ಮಳೆಯಾಗಿ ಈ ಹಳ್ಳದ ಮುಖಾಂತರ ಹರಿಯುವ ಮಳೆ ನೀರು ಸಮೀಪದ ಬೀದಿ ಮತ್ತು ಮನೆಗಳಿಗೆ ನುಗ್ಗದಿರಲು ಬೃಹತ್ ಗೋಡೆಯನ್ನು ನಿರ್ಮಿಸಲು ಉದ್ದೇಶಿಸಿಲಾಗಿದೆ. ಈ ಹಿಂದೆ ಹಲವಾರು ವ್ಯಕ್ತಿಗಳು ತಟ್ಟಹಳ್ಳದ ಸಮೀಪದ ಜಾಗವನ್ನು ಒತ್ತುವರಿ ಮಾಡಿ ಮನೆಗಳನ್ನು ಸಹ ನಿರ್ಮಿಸಿದ್ದಾರೆ. ಇದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ತಾಲೂಕು ಪಂ.ನಲ್ಲಿ 1964ರ ಅವಧಿಯ ಈ ತಟ್ಟೆಹಳ್ಳದ ನೀಲಿನಕ್ಷೆಯು ದೊರೆಯುತ್ತದೆ. ಅದನ್ನು ಪಡೆದು ಈ ಭಾಗದ ಹಳ್ಳದ ತುದಿ ಭಾಗಗಳಲ್ಲಿ ಗಡಿಯನ್ನು ಗುರುತಿಸಿ ಒತ್ತುವರಿ ಜಾಗವನ್ನು ತೆರವುಗೂಳಿಸಿ ತಡೆಗೋಡೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಿ ಎಂದರು
ಪಟ್ಟಣ ಪಂ.ಗೆ ವಿವಿಧ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಎಸ್‍ಎಫ್‍ಸಿ, 13 ಹಾಗೂ 14ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ, ಚರಂಡಿ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ಗುತ್ತಿಗೆದಾರರ ನಿರ್ಲಕ್ಷ್ಯದ ಪರಿಣಾಮ ನಿಗದಿತ ಅವಧಿಯೊಳಗಡೆ ನಡೆಯುತ್ತಿಲ್ಲ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಕೆಲ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಆದುದರಿಂದ ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ಇನ್ನೆರೆಡು ತಿಂಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭ ಇಂಜಿನಿಯರ್ ಶಿವಶಂಕರ ಆರಾಧ್ಯ ಮಾತನಾಡಿ, ಈ ಯೋಜನೆಯಡಿಯಲ್ಲಿ 23 ಕಾಮಗಾರಿಗಳು ಪೂರ್ಣಗೊಂಡಿದ್ದು, 23 ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನುಳಿದ 10 ಕಾಮಗಾರಿಗಳ ಪ್ರಕ್ರಿಯೆ ಟೆಂಡರ್ ಹಂತದಲ್ಲಿಯೇ ಎಂದು ತಿಳಿಸಿದರು. ಬಳಿಕ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ತಟ್ಟೆಹಳ್ಳದ ಚರಂಡಿ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಹಾಗೂ 10ನೇ ವಾರ್ಡಿನಲ್ಲಿ ನಿರ್ಮಿಸುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಮೂಲಕ ಬೇಗ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭ ಪಪಂ ಉಪಾಧ್ಯಕ್ಷ ಬಸವರಾಜು, ಸದಸ್ಯ ಬಾಲರಾಜನಾಯ್ಡು, ಇಂಜಿನಿಯರ್ ಗಳಾದ ಜಗದೀಶ್, ಇಂಜಿನಿಯರ್ ಶಿವಶಂಕರ ಆರಾಧ್ಯ ಲಕ್ಷ್ಮೀಪತಿ, ಪಪಂ ನೌಕರರಾದ ನಂಜುಂಡಶೆಟ್ಟಿ, ಮನಿಯಾ, ಮುಖಂಡರಾದ ಮಹೇಶ್, ಸುದೇಶ್, ಮಹದೇವು ಹಾಗೂ ಇನ್ನಿತರಿದ್ದರು.







