ಕುದುರೆಮುಖ: ಹೆದ್ದಾರಿ ಮಧ್ಯೆ ಅಡ್ಡಲಾಗಿ ನಿಂತ ಲಾರಿ; ರಸ್ತೆಯಲ್ಲಿ ಸಿಲುಕಿದ ನೂರಾರು ವಾಹನಗಳು

ಚಿಕ್ಕಮಗಳೂರ, ಆ.24: ಘನ ಲಾರಿಯೊಂದು ಕುದುರೆಮುಖ ಸಮೀಪದ ಘಾಟಿಯ ತಿರುವಿನಲ್ಲಿ ಸಿಲುಕಿಕೊಂಡ ಪರಿಣಾಮ ಕುದುರೆಮುಖ ಮಾರ್ಗವಾಗಿ ಮಂಗಳೂರು ಚಿಕ್ಕಮಗಳೂರು ಸಂಪರ್ಕದ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸಂಚಾರ ಬಂದ್ ಆಗಿ ನೂರಾರು ವಾಹನಗಳು ಟ್ರಾಫಿಕ್ ಜಾಮ್‍ಗೆ ಸಿಲುಕಿದ ಘಟನೆ ಶುಕ್ರವಾರ ವರದಿಯಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಳಸ ಸಮೀಪದಲ್ಲಿರುವ ಕುದುರೆಮುಖದ ಬಳಿಯ ತಿರುವಿಂನಲ್ಲಿ ಭಾರೀ ಲಾರಿಯೊಂದು ಮುಂದಕ್ಕೆ ಸಂಚರಿಸಲಾಗದೇ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಲಾರಿ ಮುಂದಕ್ಕೂ ಹೋಗದೇ, ಹಿಂದಕ್ಕೂ ಬಾರದಂತಹ ಸ್ಥಿತಿಗೆ ಸಿಲುಕಿದ್ದರಿಂದ ಎರಡೂ ಬದಿಯಲ್ಲಿ ನೂರಾರು ವಾಹನಗಳ ಧಟ್ಟಣೆಯಿಂದಾಗಿ ಗಂಟೆಗಟ್ಟಲೆ ವಾಹನಗಳು ಸಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇದರಿಂದಾಗಿ ಚಿಕ್ಕಮಗಳೂರು- ಮಂಗಳೂರು ಸಂಪರ್ಕದ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು.
ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಹಾಸನ, ಬೆಂಗಳೂರಿಗೆ ಹೋಗುವ, ಬರುವ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಸಾಗಲು ಅನುವು ಮಾಡಿಕೊಡಲಾಗಿದೆ. ಆದರೆ ಚಾರ್ಮಾಡಿ ಘಾಟ್‍ನಲ್ಲಿ ಭಾರೀ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್, ಅಪಘಾತದಂತಹ ಘಟನೆಗಳು ಹೆಚ್ಚಾದ ಪರಿಣಾಮ ಚಿಕ್ಕಮಗಳೂರು ಜಿಲ್ಲಾಡಳಿತ ಇತ್ತೀಚಿಗೆ ಚಾರ್ಮಾಡಿ ಘಾಟ್‍ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇದ ಹೇರಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಟ್ಟಿದ್ದರು. ಜಿಲ್ಲೆಯಿಂದ ಮಂಗಳೂರಿಗೆ ಸಂಚರಿಸುವ ಭಾರೀ ವಾಹನಗಳಿಗೆ ಕಳಸ, ಕುದುರೆಮುಖ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದ್ದು, ಇದರಿಂದಾಗಿ ಕುದುರೆಮುಖ ಹೆದ್ದಾರಿ ಮೂಲಕ ಮಂಗಳೂರಿಗೆ ಪ್ರತಿನಿತ್ಯ ನೂರಾರ ಭಾರೀ ವಾಹನಗಳು ಸಂಚರಿಸುತ್ತಿವೆ.
ಕುದುರೆಮುಖ ಸಮೀಪದಲ್ಲಿ ಹಾಗೂ ಎಸ್.ಕೆ.ಬಾರ್ಡರ್‍ನಲ್ಲಿ ಕಡಿದಾದ ಘಾಟಿಗಳಿರುವುದರಿಂದ ಈ ರಸ್ತೆಯಲ್ಲಿ ಭಾರೀ ವಾನಹಗಳ ಸಂಚಾರ ಅಪಾಯಕ್ಕೆ ಎಡೆ ಮಾಡಿಕೊಟ್ಟಂತಾಗಿದ್ದು, ಶುಕ್ರವಾರ ಮಂಗಳೂರಿಗೆ ಸರಕು ಹೊತ್ತು ಸಾಗುತ್ತಿದ್ದ ಭಾರೀ ಲಾರಿಯೊಂದ ಕಡಿದಾದ ತಿರುವಿನಲ್ಲಿ ಮುಂದೆ ಸಾಗಲಾಗದೇ ಚಾಲಕನ ನಿಯಂತ್ರ ತಪ್ಪಿದ ಲಾರಿ ರಸ್ತೆಗೆ ಅಡ್ಡಲಾಗಿ ನಿಂತಿದೆ. ಇದರಿಂದಾಗಿ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸರತಿ ಸಾಲಿನಲ್ಲಿ ಸಿಲುಕಿಕೊಳ್ಳುವಂತಾಯಿತೆಂದು ತಿಳಿದು ಬಂದಿದೆ. ಸಂಜೆ ವೇಳೆಗೆ ಲಾರಿಯನ್ನು ಹರಸಾಹಸಪಟ್ಟು ರಸ್ತೆ ಬದಿಗೆ ಸರಿಸಲಾಗಿದ್ದು, ಸದ್ಯ ಹೆದ್ದಾರಿಯಲ್ಲಿ ವಾಹಗನಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿದು ಬಂದಿದೆ.







