ಲೇವಾದೇವಿಗಾರರ ಸಾಲ ವಸೂಲಿ ನಿರ್ಬಂಧಿಸಬೇಕು: ಮಾಜಿ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಆ. 25: ‘ಸಾಲಗಾರರ ರಕ್ಷಣೆಗೆ ರಾಜ್ಯದ ಎಲ್ಲ ಉಪ ವಿಭಾಗ ಮಟ್ಟದ ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳು ಸಾಲ ಪಡೆದವರಿಂದ ಲಿಖಿತ ಅರ್ಜಿಗಳನ್ನು ಪಡೆದು ಅಂತಹವರ ಸಾಲ ವಸೂಲಾತಿಗೆ ಖಾಸಗಿ ವ್ಯಕ್ತಿಗಳನ್ನು ನಿರ್ಬಂಧಿಸುವ ದೃಢ ಹೆಜ್ಜೆಯನ್ನಿಡಬೇಕು’ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿರುವ ಅವರು, ಸಾಲಗಾರರ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕುವ ಕೆಲಸವನ್ನು ಯುದ್ದೋಪಾದಿಯಲ್ಲಿ ನಡೆದು ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಡವರ ಪರ ಈ ದಿಟ್ಟ ನಿರ್ಧಾರಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಅವರನ್ನು ಅಭಿನಂದಿಸಿದ್ದಾರೆ.
ಖಾಸಗಿ ಲೇವಾದೇವಿಗಾರರ ಮತ್ತು ಗಿರವಿಯವರ ಶೋಷಣೆಗೊಳಗಾಗಿರುವ ಬಡವರು, ಕೂಲಿ ಕಾರ್ಮಿಕರು, ಸಣ್ಣ ರೈತರು ಮತ್ತು ಇತರರನ್ನು ಮುಕ್ತಗೊಳಿಸಲು ಋಣಮುಕ್ತ ಕಾನೂನು ತಿದ್ದುಪಡಿ ಮಾಡಿ ಅನುಷ್ಠಾನಗೊಳಿಸಲು ಮೈತ್ರಿ ಸರಕಾರ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿರುವುದು ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಎಂದು ಅವರು ಹೇಳಿದ್ದಾರೆ.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಅಂಗೀಕರಿಸಿದ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ದೊರೆತು ಅದು ಈ ನೆಲದ ಕಾನೂನಾಗಿ ಮಾರ್ಪಡಲು ಕಾಲಾವಕಾಶ ಬೇಕಾಗುತ್ತದೆ. ಆದುದರಿಂದ ಈ ಪ್ರಕ್ರಿಯೆ ವಿಳಂಬ ಆಗಬಾರದು. ಈ ತಿದ್ದುಪಡಿ ಸುಗ್ರೀವಾಜ್ಞೆಯು ಚಕ್ರಬಡ್ಡಿ ಮತ್ತು ಮೀಟರ್ ಬಡ್ಡಿ ವಸೂಲಿ ಮಾಡುವವರಿಂದ ಬಡವರ ರಕ್ಷಣೆ ಮಾಡುವವರಿಂದ ಬಡವರನ್ನು ರಕ್ಷಿಸಬೇಕು. ಈಗಿನಿಂದಲೇ ಇಂತಹ ಸಾಲ ಪಡೆದ ವ್ಯಕ್ತಿಗಳನ್ನು ಪೀಡಿಸುವ ಅಥವಾ ಕಿರುಕುಳ, ಹಲ್ಲೆ ಸೇರಿ ಒತ್ತಡ ತಂತ್ರದಿಂದ ಸಾಲ ವಸೂಲಾತಿಗೆ ಮುಂದಾಗುವುದು ಸಾಧ್ಯತೆಗಳಿವೆ. ಆದುದರಿಂದ ಕಾನೂನು ಜಾರಿಗೆ ಮೊದಲು ಉಂಟಾಗಬಹುದಾದ ಅಲ್ಪಾವಧಿ ಶೋಷಣೆಯನ್ನು ತಪ್ಪಿಸಲು ಸರಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಸಾಲ ಪಡೆದ ಬಡವರಿಗೆ ಕಾನೂನು ಮತ್ತು ಅಗತ್ಯ ಪೊಲೀಸ್ ರಕ್ಷಣೆ ಒದಗಿಸುವ ಅಗತ್ಯವಿದೆ ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.







