ಬೆಂಗಳೂರು: ಚಾಲಕನ ಕಗ್ಗೂಲೆ ಪ್ರಕರಣ; ನಾಲ್ವರ ಸೆರೆ

ಬೆಂಗಳೂರು, ಆ.25: ಚಾಲಕ ನವಾಝ್ ಎಂಬಾತನನ್ನು ಕೊಲೆಗೈದಿರುವ ಆರೋಪದ ಮೇಲೆ ನಾಲ್ವರನ್ನು ಇಲ್ಲಿನ ವರ್ತೂರು ಠಾಣಾ ಪೊಲೀಸರು, ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕೋಲಾರ ಜಿಲ್ಲೆ ವೇಮಗಲ್ ವ್ಯಾಪ್ತಿಯ ಕಾರ್ತಿಕ್ (23), ಶಿವಕುಮಾರ್ (27), ರಕ್ಷಿತ್ (19), ಪವನ್ (19) ಬಂಧಿತ ಆರೋಪಿಗಳು ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಏನಿದು ಪ್ರಕರಣ: ಆ.20ರಂದು ಬೆಳಗ್ಗೆ 4:30 ಸುಮಾರಿಗೆ ಕ್ಯಾಂಟರ್ ವಾಹನ ಚಾಲಕನಾಗಿದ್ದ ನವಾಝ್(30) ಬಾಡಿಗೆ ಇರುವುದಾಗಿ ಮನೆಯಿಂದ ಹೋಗಿದ್ದರು. ನಂತರ ಅವರು ಮನೆಗೆ ಬಂದಿರಲಿಲ್ಲ. ಈ ಸಂಬಂಧ ಪತಿ ಕಾಣೆಯಾಗಿರುವ ಬಗ್ಗೆ ಪತ್ನಿ ಆಯಿಶಾ ಮರು ದಿನ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ವರ್ತೂರು ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೋಲಾರದ ವೇಮಗಲ್ ಮೂಲದ ಶಿವಕುಮಾರ್ ಹಾಗೂ ಆತನ ಮೂವರು ಸಹಚರರು ಸೇರಿ ಬಾಡಿಗೆ ನೆಪದಲ್ಲಿ ನವಾಝ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆರೋಪಿಗಳು ಮೃತದೇಹವನ್ನು ಗೋಣಿಚೀಲಕ್ಕೆ ಹಾಕಿ ಶವವನ್ನು ಚಿಕ್ಕಮಗಳೂರು ಬಳಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿದರು.







