ಫೆಲೆಸ್ತೀನ್‌ಗೆ 200 ಮಿಲಿಯನ್ ಡಾಲರ್ ಅನುದಾನ ಕಡಿತಗೊಳಿಸಿದ ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಆ.25: ಫೆಲೆಸ್ತೀನ್ ಮತ್ತು ಅಮೆರಿಕ ಮಧ್ಯೆ ಸಂಬಂಧ ಹಳಸುತ್ತಿರುವ ಮದ್ಯೆಯೇ ಫೆಲೆಸ್ತೀನ್‌ಗೆ ನೀಡಲಾಗುವ ಅನುದಾನದಲ್ಲಿ 200 ಮಿಲಿಯನ್ ಡಾಲರ್‌ಗೂ ಅಧಿಕ ಮೊತ್ತವನ್ನು ಕಡಿತಗೊಳಿಸಲು ಡೊನಾಲ್ಡ್ ಟ್ರಂಪ್ ನಿರ್ಧರಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಹಿಂದೆ ಗಾಝಾ ಮತ್ತು ಪಶ್ಚಿಮ ದಂಡೆಯಲ್ಲಿ ವಿವಿಧ ಯೋಜನೆಗಳಿಗೆ ಬಳಸಲು ಉದ್ದೇಶಿಸಲಾಗಿದ್ದ ನಿಧಿಯನ್ನು ಈಗ ಇತರ ಭಾಗಗಳಲ್ಲಿ ನಡೆಯುವ ಪ್ರಮುಖ ಯೋಜನೆಗಳಿಗೆ ಬಳಸಲು ನಿರ್ಧರಿಸಲಾಗಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಫೆಲೆಸ್ತೀನ್‌ಗೆ ನೀಡುವ ಸಹಾಯಧನದ ಬಗ್ಗೆ ನಾವು ವಿಮರ್ಶೆ ನಡೆಸಿದ್ದು, ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಮೆರಿಕನ್ ಪ್ರಜೆಗಳ ತೆರಿಗೆಗೆ ಮೌಲ್ಯವನ್ನು ಒದಗಿಸುವ ಉದ್ದೇಶದಿಂದ ಈ ಅನುದಾನವನ್ನು ಇತರ ಭಾಗಗಳಲ್ಲಿ ನಡೆಯುವ ಯೋಜನೆಗಳಿಗೆ ಬಳಸಿಕೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ನಿರ್ಧರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿ ಎಂದು ಪರಿಗಣಿಸಿದ ಟ್ರಂಪ್ ತನ್ನ ರಾಯಭಾರಿ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿದ ಪರಿಣಾಮವಾಗಿ ಫೆಲೆಸ್ತೀನ್ ಸರಕಾರ ಅಮೆರಿಕ ಜೊತೆಗಿನ ಶಾಂತಿ ಮಾತುಕತೆಯನ್ನು ಬಹಿಷ್ಕರಿಸಿತ್ತು. ಇದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಗಾಝಾ ಮೇಲೆ ತೀವ್ರಗಾಮಿ ಪಡೆ ನಿಯಂತ್ರಣವನ್ನು ಸಾಧಿಸಿರುವುದೇ ಅನುದಾನ ಕಡಿತಗೊಳಿಸಲು ಪ್ರಮುಖ ಕಾರಣ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಹಮಾಸ್‌ಅನ್ನು ಉಗ್ರಗಾಮಿ ಸಂಘಟನೆ ಎಂದು ಪರಿಗಣಿಸಿದೆ. ಅಮೆರಿಕದ ಈ ನಿರ್ಧಾರ ಗಾಝಾದಲ್ಲಿ ಈಗಾಗಲೇ ಸಂಕಷ್ಟದಲ್ಲಿರುವ ಜನರ ಕಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಾಝಾದಲ್ಲಿ ಈಗಾಗಲೇ ಎರಡು ಮಿಲಿಯನ್ ಫೆಲೆಸ್ತೀನಿಯರು ಜಮಾವಣೆಯಾಗಿದ್ದು ಇಡೀ ಪ್ರದೇಶ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.
ಡೊನಾಲ್ಡ್ ಟ್ರಂಪ್ ಆಡಳಿತ ಕೆಟ್ಟ ಬ್ಲಾಕ್‌ಮೇಲ್ ತಂತ್ರವನ್ನು ರಾಜಕೀಯ ದಾಳವಾಗಿ ಬಳಸುತ್ತಿದೆ ಎಂದು ಫೆಲೆಸ್ತೀನ್ ಲಿಬರೇಶನ್ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಹನನ್ ಅಶ್ರವಿ ಆರೋಪಿಸಿದ್ದಾರೆ.
ಅಮೆರಿಕದ ಒತ್ತಡಕ್ಕೆ ಫೆಲೆಸ್ತೀನ್‌ನ ಜನರು ಮತ್ತು ನಾಯಕತ್ವ ಹೆದರುವುದಿಲ್ಲ ಮತ್ತು ಬಗ್ಗುವುದಿಲ್ಲ ಎಂದು ಹನನ್ ತಿಳಿಸಿದ್ದಾರೆ.







