ಆಂತರಿಕ, ಬಾಹ್ಯ ಭದ್ರತೆಯಿಂದ ದೇಶದ ಪ್ರಗತಿ ಸಾಧ್ಯ: ಎಸ್ಪಿ ನಿಂಬರ್ಗಿ

ಉಡುಪಿ, ಆ.25: ಸೈನಿಕರು ದೇಶಕ್ಕೆ ಬಾಹ್ಯ ರಕ್ಷಣೆ ನೀಡಿದರೆ, ಪೊಲೀಸರು ಆಂತರಿಕ ಭದ್ರತೆಯನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಎರಡು ಭದ್ರತೆ ಸರಿಯಾಗಿದ್ದರೆ ಮಾತ್ರ ದೇಶ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬಿ.ನಿಂಬರ್ಗಿ ಹೇಳಿದ್ದಾರೆ.
ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಶತ ಮಾನೋತ್ಸವ ಆಚರಣೆಯ ಪ್ರಯುಕ್ತ ಶನಿವಾರ ಉಡುಪಿ ಪುರಭವನದಲ್ಲಿ ಆಯೋಜಿಸಲಾದ ಹಿರಿಯ ನಿವೃತ್ತ ಮಾಜಿ ಸೈನಿಕರಿಗೆ ಸನ್ಮಾನ, ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ದೇಶಭಕ್ತಿ ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಜಾತಿ, ಧರ್ಮ ಮರೆತು ನಾವೆಲ್ಲ ಒಂದೇ ಎಂಬ ಭಾವನೆಯೇ ನಿಜವಾದ ದೇಶಪ್ರೇಮವಾಗಿದೆ. ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವವರು ಕರ್ತವ್ಯದ ಬಗ್ಗೆ ವೌನವಾಗಿದ್ದಾರೆ. ಹಕ್ಕುಗಳಷ್ಟೆ ಕರ್ತವ್ಯ ಪಾಲಿಸುವುದು ಮುಖ್ಯ ವಾಗುತ್ತದೆ. ಇದರಿಂದ ದೇಶದಲ್ಲಿ ಶಾಂತಿ ನೆಲೆಸಿ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಹಿರಿಯ ನಿವೃತ್ತ ಸೈನಿಕರಾದ ಕಮಾಂಡರ್ ಕ್ಯಾಸ್ತಲಿನೋ, ಚಂದ್ರಶೇಖರ್ ಸುವರ್ಣ, ಡಾ.ಇ.ಎಫ್.ರೋಡ್ರಿಗಸ್, ಗಣೇಶ್ ರಾವ್, ಗಣಪಯ್ಯ ಶೇರಿಗಾರ್, ಕರ್ನಲ್ ರಾಮಚಂದ್ರ ರಾವ್, ರಘುಪತಿ ರಾವ್, ಸುಭಾಷ್ ಕೆ., ಲಕ್ಷ್ಮೀನಾರಾಯಣ ಬಾಳಿಗ, ರಘುರಾಮ ಶೆಟ್ಟಿ, ಜೋಸೆಫ್ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ನಿವೃತ್ತ ಸೈನ್ಯಾಧಿಕಾರಿ ಕರ್ನಲ್ ಮಾಧವ ಶ್ಯಾನುಭೋಗ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಕುಂದಾ ಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರ ಪ್ರತಿಮಾ, ಯು.ಚಾನೆಲ್ ಮುಖ್ಯಸ್ಥ ಎಸ್.ಪ್ರಸಾದ್ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಶೆಟ್ಟಿ, ಸೊಸೈಟಿ ಉಪಾಧ್ಯಕ್ಷ ಎಲ್.ಉಮಾನಾಥ, ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು. ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸನ್ನ ಶೆಟ್ಟಿ ವಂದಿಸಿದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.
ಸೈಂಟ್ ಮೇರಿಸ್ ಶಾಲೆ ಪ್ರಥಮ
ಯು ಚಾನೆಲ್ ಸಹಕಾರದೊಂದಿಗೆ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ದೇಶಭಕ್ತಿ ನೃತ್ಯ ಸ್ಪರ್ಧೆಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದವು.
ಉಡುಪಿ ಕನ್ನರ್ಪಾಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ 15ಸಾವಿರ ರೂ., ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ದ್ವಿತೀಯ 10ಸಾವಿರ ರೂ., ಉಡುಪಿ ಎಂಜಿಎಂ ಕಾಲೇಜು ತೃತೀಯ 5ಸಾವಿರ ನಗದು ಬಹುಮಾನವನ್ನು ಗೆದ್ದುಕೊಂಡವು.







