ಸಿದ್ದರಾಮಯ್ಯ ಸಿಎಂ ಆಗುತ್ತೇನೆಂದು ಹೇಳಿದ್ದರಲ್ಲಿ ತಪ್ಪೇನಿದೆ: ರೇವಣ್ಣ ಪ್ರಶ್ನೆ

ಬೆಂಗಳೂರು, ಆ. 26: ಮಾಜಿ ಸಿಎಂ ಸಿದ್ದರಾಮಯ್ಯ ಏಕಾಂಗಿಯಲ್ಲ. ಅವರೊಬ್ಬ ಜನನಾಯಕ. ರಾಷ್ಟ್ರೀಯ ಪಕ್ಷವೊಂದರ ಮುಖಂಡರು, ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಜನರೊಂದಿಗೆ ಮಾತನಾಡುವ ವೇಳೆ ಮತ್ತೆ ನಾನು ಸಿಎಂ ಆಗುತ್ತೇನೆಂದು ಹೇಳಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜನರೊಂದಿಗೆ ಮಾತನಾಡುವ ವೇಳೆ ನಾನು ಉತ್ತಮವಾಗಿ ಕೆಲಸಗಳನ್ನು ಮಾಡಿದರೂ, ನಮಗೆ ಬಹುಮತ ಸಿಗಲಿಲ್ಲ. ಆಗ ನೀವು ಮತ್ತೆ ಸಿಎಂ ಆಗಬೇಕು ಅಂದಾಗ ಜನರ ಆಶೀರ್ವಾದ ನಮ್ಮ ಮೇಲಿದ್ದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತೀನಿ ಅಂತಾ ಹೇಳಿದ್ದಾರೆ ಎಂದರು.
ರಾಜಕಾರಣದಲ್ಲಿ ಎಲ್ಲರಿಗೂ ಅಧಿಕಾರ ಪಡೆಯಬೇಕೆಂಬ ಆಸೆ ಸಹಜ. ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ಹಿಡಿದು ತಾವು ಅಧಿಕಾರದಲ್ಲಿ ಇರಬೇಕೆಂದು ಇಚ್ಛಿಸುತ್ತಾರೆ. ರಾಜಕಾರಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾರನ್ನು ಹೊರತುಪಡಿಸಿ ಎಲ್ಲರಿಗೂ ಅಧಿಕಾರ ಪಡೆಯಬೇಕೆಂಬ ಮನೋಭಾವ ಇರುತ್ತದೆ ಎಂದರು.
ಮೈತ್ರಿ ಸರಕಾರ ಉತ್ತಮವಾಗಿ ನಡೆಯುತ್ತಿದೆ. ಸರಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಸಿದ್ದರಾಮಯ್ಯರ ಹೇಳಿಕೆಗೂ ಸರಕಾರ ರಚನೆಗೆ ಸಂಬಂಧಿಸಿಲ್ಲ. ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.







