ಸಮನ್ವಯ ಸಮಿತಿಯಲ್ಲಿ ಜೆಡಿಎಸ್‍ಗೂ ಸ್ಥಾನ ಬೇಕು : ಹೆಚ್.ವಿಶ್ವನಾಥ್ ಬೇಡಿಕೆ

ಮಡಿಕೇರಿ,ಆ.26 : ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳೆರಡರ ರಾಜ್ಯಾದ್ಯಕ್ಷರಿಗೆ ಸ್ಥಾನಮಾನ ನೀಡಲೇಬೇಕು. ಅವರು ಬೇಡ ಇವರು ಬೇಡ ಎಂದು ಸಿದ್ದರಾಮಯ್ಯ ಹಠ ಹಿಡಿದಿರೋದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಎಲ್ಲಾ 22 ಮಿತ್ರ ಪಕ್ಷಗಳ ಅಧ್ಯಕ್ಷರೂ ಸಮನ್ವಯ ಸಮಿತಿಯ ಸದಸ್ಯರಾಗಿದ್ದರು. ಹೀಗಿರುವಾಗ ಎರಡು ಪಕ್ಷಗಳು ಸೇರಿರುವ ಸರಕಾರದ ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರು ಸದಸ್ಯರಾಗಿರಲೇಬೇಕು ಎಂದು ಅಭಿಪ್ರಾಯಪಟ್ಟರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ವಿಧಾನಸೌಧದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ಸಮನ್ವಯ ಸಮಿತಿ ಸಭೆ ನಡೆಸಲಿ ಎಂದು ಸಲಹೆ ನೀಡಿದ ವಿಶ್ವನಾಥ್, ಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಸಿದ್ದರಾಮಯ್ಯ ತಮ್ಮ ಅನುಭವವನ್ನು ಸಮ್ಮಿಶ್ರ ಸರಕಾರದ ಯಶಸ್ವಿ ಕಾರ್ಯಕ್ಕೆ ಬಳಸಿಕೊಳ್ಳಬೇಕೆಂದೂ ಸಲಹೆ ನೀಡಿದರು. 2 ಪಕ್ಷಗಳಾದ ಜೆಡಿಎಸ್ - ಕಾಂಗ್ರೆಸ್ ಸೇರಿಕೊಂಡೇ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿರುವಾಗ ಆ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಸಮಿತಿಯಲ್ಲಿ ಸದಸ್ಯ ಸ್ಥಾನ ಸಿಗಬೇಕಾಗಿದೆ ಎಂದೂ ವಿಶ್ವನಾಥ್ ಹೇಳಿದರು.







