'ಮೋದಿ ಸರಕಾರ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ಭಾರೀ ಅವ್ಯವಹಾರ ನಡೆಸಿದೆ'
ಕೇಂದ್ರದ ಮಾಜಿ ಸಚಿವ ಪಲ್ಲಂ ರಾಜು ಆರೋಪ
ಮೈಸೂರು,ಆ.26: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ.ರೂ ಗಳ ಭಾರೀ ಹಗರಣ ನಡೆಸಿದೆ ಎಂದು ಕೇಂದ್ರದ ಮಾಜಿ ಸಚಿವ ರಾಜ್ಯ ಸಭಾ ಸದಸ್ಯ ಪಲ್ಲಂ ರಾಜು ಆರೋಪಿಸಿದರು.
ರವಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಪಲ್ಲಂ ರಾಜು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಮೋದಿ ಸರಕಾರ ರಾಷ್ಟ್ರದ ಅರ್ಥವ್ಯವಸ್ಥೆಯನ್ನು ನಾಶ ಮಾಡಿದಲ್ಲದೆ, ಭಾರತವು ಅನುಸರಿಸಿಕೊಂಡು ಬಂದಿರುವ ವಿದೇಶಾಂಗ ನೀತಿಯನ್ನು ಬದಲಾಯಿಸಿ ಸಮಾಜದಲ್ಲಿ ದ್ವೇಶವನ್ನು ಬಿತ್ತಿ, ತಮ್ಮ ಸ್ನೇಹಿತರಿಗೋಸ್ಕರ ರಾಷ್ಟ್ರದ ಹಿತಾಸಕ್ತಿಯನ್ನು ಮಾರಿದೆ ಎಂದು ಹರಿಹಾಯ್ದರು.
ಯುಪಿಎ ಸರಕಾರದ ಅವಧಿಯಲ್ಲಿ 126 ವಿಮಾನಗಳನ್ನು ಭಾರತೀಯ ವಾಯು ಸೇನೆಗೆ 54000 ಕೋಟಿ ರೂ. ಗಳಲ್ಲಿ ಖರೀದಿಸಲು ತೀರ್ಮಾನಿಸಲಾಗಿತ್ತು. ದಸ್ಸಾಲ್ಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು 18 ವಿಮಾನಗಳನ್ನು ಹಾರಾಟದ ಸ್ಥಿತಿಯಲ್ಲಿ ಭಾರತಕ್ಕೆ ಕೊಡುವುದು, ತಂತ್ರಜ್ಞಾನದ ವರ್ಗಾವಣೆಯ ಮೂಲಕ ಬೆಂಗಳೂರಿನ ಎಚ್.ಎ.ಎಲ್ ಕಾರ್ಖಾನೆಗೆ ಉಳಿದ 108 ವಿಮಾನಗಳನ್ನು ಉತ್ಪಾದಿಸುವ ಸಲುವಾಗಿ ನೀಡಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ನಿಯಾಮಾವಳಿಗಳನ್ನು ಗಾಳಿಗೆ ತೂರಿ 36 ವಿಮಾನಗಳನ್ನು ಖರೀದಿಸುವ ಅಂತಾರಾಷ್ಟ್ರೀಯ ಒಪ್ಪಂದವನ್ನು ಮಾಡಿ 60000 ಕೋಟಿ ರೂಪಾಯಿಗಳ ಬೆಲೆಯಲ್ಲಿ ಖರೀದಿಸಲು ತೀರ್ಮಾನಿಸಿ ಬಾರಿ ಅವ್ಯವಹಾರ ನಡೆಸಿದೆ. ವಿಮಾನ ಉತ್ಪಾದನೆಯಲ್ಲಿ ಯಾವುದೇ ಅನುಭವವಿಲ್ಲದ ರಿಲೆಯನ್ಸ್ ಡಿಫೆನ್ಸ್ ಅಂಡ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಗೆ 21000 ಕೋಟಿ ರೂ.ಗಳ ಬಿಡಿ ಭಾಗಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಂಡಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ಕಿಡಿಕಾರಿದರು.
ಯುಪಿಎ ಒಪ್ಪಂದದ ಪ್ರಕಾರ ಪ್ರತಿ ವಿಮಾನಕ್ಕೆ 526.10 ಕೋಟಿ ಬೆಲೆ ಇತ್ತು. ಆದರೆ ಮೋದಿಯವರು ಮಾಡಿಕೊಂಡ ಒಪ್ಪಂದದಂತೆ ಪ್ರತಿ ವಿಮಾನಕ್ಕೆ 1670.70 ಕೋಟಿಯಾಗಿದೆ. ಇಷ್ಟು ದುಬಾರಿ ವೆಚ್ಚದಲ್ಲಿ ಖರೀದಿಸುವ ಅವಶ್ಯಕತೆಯ ಬಗ್ಗೆ ಅನುಮಾನವಿದೆ ಎಂದರು.
ಮೋದಿಯವರು ಮಾಡಿಕೊಂಡ ಅಂತಾರಾಷ್ಟ್ರೀಯ ಒಪ್ಪಂದವು ಸಚಿವ ಸಂಪುಟದ ರಕ್ಷಣಾ ಉಪ ಸಭೆಯಲ್ಲಿ ಚರ್ಚೆಯೂ ಅಗಿಲ್ಲ ಮತ್ತು ರಕ್ಷಣಾ ಸಾಮಗ್ರಿಗಳ ಖರೀದಿಯ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಮೋದಿ ಅವರು ತೆಗೆದುಕೊಂಡ ನಿಲುವು ಏಕ ಪಾತ್ರವಾಗಿದೆ ಎಂದು ದೂರಿದರು.
ಎಚ್.ಎ.ಎಲ್ ಕಾರ್ಖಾನೆಗೆ ನೀಡಬೇಕಾಗಿದ್ದ ತಂತ್ರಜ್ಞಾನದ ವರ್ಗಾವಣೆಯನ್ನು ದಸ್ಸಾಲ್ಟ್ ಕಂಪನಿಯವರು ಅಂಬಾನಿಯವರ ಹೊಸ ಕಾರ್ಖಾನೆಗೆ 30000 ಕೋಟಿ ರೂ.ಗಳ ಬಿಡಿ ಭಾಗಗಳನ್ನು ತಯಾರಿಸುವುದಕ್ಕೆ ಅನುವು ಮಾಡಿಕೊಡುವ ಮೂಲಕ ನೇಂದ್ರ ಮೋದಿ ಅಂಬಾನಿ ಅವರ ಕಂಪನಿಯ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವ್ಯವಹಾರದಲ್ಲಿ ಬಾರೀ ಅವ್ಯವಹಾರ ನಡೆದಿದ್ದು, ರಾಷ್ಟ್ರದ ಜನತೆ ಕಾಂಗ್ರೆಸ್ ಪಕ್ಷ ತಿಳಿಸುವ ಪ್ರಯತ್ನಮಾಡುತ್ತಿದೆ. ಇದೊಂದು ಇತಿಹಾಸ ಚರಿತ್ರೆಯಲ್ಲಿ ದಾಖಲಾಗುವ ಅವ್ಯವಹಾರ ಎಂದರಲ್ಲದೆ ಮೋದಿಯವರು ಹೇಳುತ್ತಿದ್ದ ಅಭಿವೃದ್ಧಿ ಮತ್ತು ಉತ್ತಮ ದಿನಗಳು ಸುಳ್ಳಾಗಿವೆ ಎಂದು ಗುಡುಗಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.