ರಕ್ಷಾಬಂಧನದ ಸಾರ್ಥಕ ಸೇವೆ ಪೊಲೀಸ್ ಇಲಾಖೆ ನಿತ್ಯ ಮಾಡುತ್ತದೆ:ಎಸ್ಪಿ ಸಂಗೀತಾ
ಧಾರವಾಡ, ಆ.26: ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಸಹೋದರತ್ವದ ಪ್ರತಿಕವಾದ ರಕ್ಷಾಬಂಧನದ ಆಶಯವನ್ನು ಈಡೇರಿಸುವ ಸಾರ್ಥಕ ಸೇವೆಯನ್ನು ಪೊಲೀಸ್ ಇಲಾಖೆ ನಿತ್ಯ ಮಾಡುತ್ತದೆ. ಇದನ್ನು ಗುರುತಿಸಿ ಗೌರವಿಸಿರುವ ಸಹೋದರಿಯರಿಗೆ ಧನ್ಯವಾದಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಹೇಳಿದ್ದಾರೆ.
ರವಿವಾರ ಧಾರವಾಡದ ಕಲ್ಪತರು ಮಹಿಳಾ ಸಂಘದ ಸಹೋದರಿಯರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ, ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಜನರಿಗೆ ನೆಮ್ಮದಿಯ ಬದುಕು ಬದುಕಲು ಪೊಲೀಸ್ ಇಲಾಖೆಯ ಸಿಬ್ಬಂದಿ ಸದಾ ಶ್ರಮಿಸುತ್ತದೆ. ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಆಧ್ಯತೆ ನೀಡಲಾಗಿದ್ದು, ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯಗಳು ಘಟಿಸಿದಾಗ ತಕ್ಷಣ ಸ್ಪಂದಿಸಿ ಅಗತ್ಯ ನೇರವು ಮತ್ತು ಸಹಾಯವನ್ನು ನೀಡಲಾುತ್ತದೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಇರುವ ಸಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕುಗಳು ಹಾಗೂ ಇಲಾಖೆಯಿಂದ ಅವರಿಗೆ ಇರುವ ಸಹಾಯ, ಸಹಕಾರ ಮತ್ತು ಬೆಂಬಲಗಳ ಕುರಿತು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಬಿಟ್ ಪೊಲೀಸ್ ವ್ಯವಸ್ಥೆ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ, ಮಾಹಿತಿ ಮತ್ತು ತಿಳುವಳಿಕೆಯನ್ನು ನೀಡಿ ಜನಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಂಗೀತಾ ತಿಳಿಸಿದರು.
ಪೊಲೀಸ್ ಸಿಬ್ಬಂದಿಗಳಿಗೆ ನೈತಿಕ ಬೆಂಬಲ ಮತ್ತು ಕೃತಜ್ಞತೆಯನ್ನು ಸಲ್ಲಿಸುವ ರೀತಿಯಲ್ಲಿ ಕಲ್ಪತರು ಮಹಿಳಾ ಸಂಘದ ಸಹೋದರಿಯರು ಸ್ವತಃ ಪೊಲೀಸ್ ಠಾಣೆವರೆಗೆ ಬಂದು ಪವಿತ್ರವಾದ ರಕ್ಷಾಬಂಧನ ನೀಡುವ ಮೂಲಕ ಬೆಂಬಲಿಸಿದ್ದಾರೆ. ಅವರಿಗೆ ಇಲಾಖೆವತಿಯಿಂದ ಧನ್ಯವಾದಗಳು ಎಂದು ಅವರು ಹೇಳಿದರು.
ಉಪ ಪೊಲೀಸ್ ಅಧೀಕ್ಷಕ ಡಾ.ಬಿ.ಪಿ.ಚಂದ್ರಶೇಖರ್ ಮಾತನಾಡಿ, ಪೊಲೀಸ್ ಇಲಾಖೆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಸ್ವಹಿತಾಸಕ್ತಿಯ ಮತ್ತು ಅಹಂ ಮನೊಭಾವದ ಕೆಲ ವ್ಯಕ್ತಿಗಳು ಪೊಲೀಸ್ ಇಲಾಖೆ ಬಗ್ಗೆ ನಕಾರಾತ್ಮಕ ಭಾವನೆ ಬೆಳೆಸಲು ಪ್ರಯತ್ನಿಸುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಉನ್ನತ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಹೊಂದಿರುವ ಸಿಬ್ಬಂದಿಗಳು ತಮ್ಮ ಪ್ರಾಮಾಣಿಕ ಸೇವೆಯಿಂದ ಜನಸಾಮಾನ್ಯರ ಮನ ಗೆಲ್ಲುತ್ತಾರೆ ಎಂದರು.
ಕಲ್ಪತರು ಮಹಿಳಾ ಸಂಘದ ಸಹೋದರಿಯರು ಇಂದು ರಕ್ಷಾಬಂಧನ ನೀಡುವ ಮೂಲಕ ನಮ್ಮ ಪೊಲೀಸ್ ಠಾಣೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಬೇರೆ ಬೇರೆ ಕಡೆ ಇಂದ ಕರ್ತವ್ಯಕ್ಕೆ ಬಂದಿರುವ ಸಿಬ್ಬಂದಿಗಳಿಗೆ ಕಾರ್ಯನಿಮಿತ್ತವಾಗಿ ಇಂತಹ ಹಬ್ಬಗಳನ್ನು ಕುಟುಂಬದೊಂದಿಗೆ ಆಚರಿಸಲು ಸಾಕಷ್ಟು ಸಲ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರು ಠಾಣೆವರೆಗೆ ಬಂದು ರಕ್ಷಾಬಂಧನ ಕಟ್ಟಿಸಿ ನೀಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿ ಇನ್ನಷ್ಟು ಕೆಲಸಮಾಡಲು ಪ್ರೇರಣೆ ನೀಡಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಪತರು ಮಹಿಳಾ ಸಂಘದ ಅಧ್ಯಕ್ಷೆ ಆರತಿ ಪಾಟೀಲ್ ಮಾತನಾಡಿ, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಮಹಿಳೆಯರು ಸೇರಿದಂತೆ ಸಮಾಜದ ಶಾಂತಿ, ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಹೋದರರಿಗೆ ರಕ್ಷಾಬಂಧನವನ್ನು ಕಟ್ಟುವ ಮೂಲಕ ಜಿಲ್ಲೆಯ ಮಹಿಳೆಯರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೆವೆ. ಇಂತಹ ವ್ಯವಸ್ಥೆಗಳಿಂದಾಗಿ ಮಹಿಳೆಯರು ಇಂದು ಭಯ ಮುಕ್ತರಾಗಿ ಬದುಕುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಪ್ರಶಾಂತ ನಾಯ್ಕ, ಜಿಲ್ಲಾ ಪೊಲೀಸ್ ಅಪರಾಧ ವಿಭಾಗದ ಸಿಪಿಐ ಎಸ್.ಬಿ.ಮಾಳಗೊಂಡ, ವಾರ್ತಾ ಸಹಾಯಕ ಅಧಿಕಾರಿ ಡಾ.ಎಸ್.ಎಂ.ಹಿರೇಮಠ, ಮಹಿಳಾ ಪೊಲೀಸ್ ಠಾಣೆಯ ಭಾನು ಎಸ್.ಕುಲಕರ್ಣಿ ಉಪಸ್ಥಿತರಿದ್ದರು.