ಪಡುಬಿದ್ರೆ : ತಡೆದು ನಿಲ್ಲಿಸಿ ಚಿನ್ನದ ಸರ, ನಗದು ದರೋಡೆ
ಪಡುಬಿದ್ರೆ, ಆ. 26: ಮೂವರ ತಂಡ ಬೈಕ್‌ನಲ್ಲಿ ಬಂದು ವ್ಯಕ್ತಿಯೋರ್ವರನ್ನು ತಡೆದು ನಿಲ್ಲಿಸಿ ಚಿನ್ನದ ಸರ ಹಾಗೂ ನಗದನ್ನು ದೋಚಿದ ಘಟನೆ ಉಚ್ಚಿಲ-ಪಣಿಯೂರು ರಸ್ತೆಯ ದುರ್ಗಾ ನಗರ ಕ್ರಾಸ್ ಬಳಿ ಶನಿವಾರ ರಾತ್ರಿ ನಡೆದಿದೆ.
ಉಡುಪಿಯಲ್ಲಿ ಎಟಿಎಂಗಳಿಗೆ ಹಣ ತುಂಬಿಸುವ ಕೆಲಸ ನಿರ್ವಹಿಸುತಿದ್ದ ಪಣಿಯೂರಿನ ನಿವಾಸಿ ಪವನ್ ಕುಮಾರ್ ಎಂಬವರು ಶನಿವಾರ ರಾತ್ರಿ 8.30ರ ವೇಳೆಗೆ ಉಚ್ಚಿಲದಲ್ಲಿ ಅಣ್ಣನನ್ನು ಕರೆದುಕೊಂಡು ಬರಲು ಹೋಗುವ ವೇಳೆ ಈ ಘಟನೆ ನಡೆದಿದೆ. ದುರ್ಗಾನಗರ ಕ್ರಾಸ್ ಬಳಿ ತಲುಪುವಾಗ ಹಿಂದಿನಿಂದ ಎರಡು ಬೈಕ್‌ಗಳಲ್ಲಿ ಮೂವರು ತಡೆದು ನಿಲ್ಲಿಸಿ ಹಲ್ಲೆ ಮಾಡಿ, ಕುತ್ತಿಗೆಯಲ್ಲಿದ್ದ ನಾಲ್ಕೂವರೆ ಪವನ್ ತೂಕದ ಚಿನ್ನದ ಸರ ಹಾಗೂ ಪರ್ಸ್‌ನಲ್ಲಿದ್ದ 11,500 ರೂ ದೋಚಿದ್ದು, ಈ ವೇಳೆ ಕೂಗಾಟ ಕೇಳಿ ಹತ್ತಿರದ ಮನೆಯವರು ಬರುವುದನ್ನು ಕಂಡ ಮೂವರು ಪರಾರಿಯಾದರು ಎಂದು ಪವನ್ ಕುಮಾರ್ ಪಡುಬಿದ್ರೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.
Next Story





