ಭಿನ್ನಾಭಿಪ್ರಾಯ ಬದಿಗಿಟ್ಟು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ : ದಿನೇಶ್ ಗುಂಡೂರಾವ್
ಬೆಳಗಾವಿ, ಆ.26: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು, ಎಲ್ಲ ಮುಖಂಡರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಶ್ರಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ದೊರೆಯುವ ಹಾಗೂ ಅಧಿಕಾರವನ್ನು ಹಿಡಿಯುವ ವಿಶ್ವಾಸವಿದೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ವಿರೋಧಪಕ್ಷದವರು ಮಾಡಿದ ಅಪಪ್ರಚಾರ ಸೇರಿದಂತೆ ಇನ್ನಿತರ ಕಾರಣಗಳಿಂದ ನಿರೀಕ್ಷೆಗೆ ತಕ್ಕಂತೆ ನಾವು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಅಥವಾ ಒಳ್ಳೆಯ ಕೆಲಸಗಳು ಆಗಿಲ್ಲ ಎಂದು ಜನರು ಹೇಳಲಿಲ್ಲ. ಉತ್ತಮ ಆಡಳಿತ ನೀಡುವುದರಲ್ಲಿಯೂ ನಾವು ಯಶಸ್ವಿಯಾಗಿದ್ದೇವು. ನಾವು ಮಾಡಿದ ಜನಪರವಾದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ, ಮತಯಾಚಿಸಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ಜನರ ಬಳಿ ಹೋಗಿ ಮತ ಕೇಳಲು ನಮಗೆ ಯಾವ ಮುಜುಗರವು ಇಲ್ಲ. ರಾಜ್ಯ ಸರಕಾರದಲ್ಲಿ ನಾವು ಭಾಗಿದಾರರಾಗಿದ್ದೇವೆ. ಸರಕಾರದಿಂದ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ಪುನರ್ ರಚನೆ ಮಾಡಲಾಗುವುದು. ಮುಖಂಡರು ಮತಗಟ್ಟೆ ವ್ಯಾಪ್ತಿಗಳಲ್ಲಿ ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಬೇಕು. ಸ್ಥಳೀಯ ಸಂಸ್ಥೆಗಳೊಂದಿಗೆ ಲೋಕಸಭಾ ಚುನಾವಣೆಗೂ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಕ್ರಿಯಾಶೀಲ ಹಾಗೂ ಸಂಘಟನಾ ಚತುರತೆ ಹೊಂದಿರುವವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.
ಸಮ್ಮಿಶ್ರ ಸರಕಾರಕ್ಕೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡಿದ್ದೇವೆ. ರೈತರ ಸಾಲ ಮನ್ನಾ ವಿಚಾರದಲ್ಲಿಯೂ ನಮ್ಮ ಸಹಮತವಿದೆ. ಆದುದರಿಂದ, ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು ಎಂದು ಅವರು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಗ್ರಾಮಾಂತರ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮಾಜಿ ಶಾಸಕ ಫಿರೋಝ್ ಸೇಠ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮುಖಂಡರಾದ ಪಿ.ವಿ.ಮೋಹನ್, ಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡರ ಜಟಾಜಟಿ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಪಿ.ವಿ.ಮೋಹನ್ ಅವರನ್ನು ಫಿರೋಝ್‌ಸೇಠ್ ತರಾಟೆಗೆ ತೆಗೆದುಕೊಂಡರು. ಈ ವೇಳೆ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪಕ್ಷದ ಅಧ್ಯಕ್ಷರ ಪಕ್ಕದಲ್ಲಿ ನಗರ ಘಟಕದ ಅಧ್ಯಕ್ಷರು ಕೂರಬೇಕು, ನೀವೇಕೆ ಕುಳಿತಿದ್ದೀರಿ ಎಂದು ಫಿರೋಝ್ ಸೇಠ್ ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮೋಹನ್, ಬೇರೆ ಕಡೆ ಕುರ್ಚಿ ಇದೆಯಲ್ಲವೇ ಎಂದರು. ಇದು ಪಕ್ಷದ ಸಭೆ, ಆದುದರಿಂದ ಅಧ್ಯಕ್ಷರಿಗೆ ಅವಕಾಶ ಮಾಡಿಕೊಡಬೇಕೆಂದು ತಮ್ಮ ಸಹೋದರ ರಾಜು ಸೇಠ್ ಪರವಾಗಿ ವಾದಿಸಿದರು. ಆನಂತರ, ಗೊಣಗುತ್ತಲೇ ಮೋಹನ್ ಪಕ್ಕದ ಕುರ್ಚಿಯಲ್ಲಿ ಕೂತು, ರಾಜು ಸೇಠ್‌ಗೆ ಅವಕಾಶ ಮಾಡಿಕೊಟ್ಟರು.