ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬನ್ನಂಜೆ ರಾಜಾಗೆ ಕೋರ್ಟ್ ಅನುಮತಿ
ಉಡುಪಿ, ಆ. 26: ಮಲ್ಪೆ ಬೀಚ್ ಬಳಿಯ ರುದ್ರಭೂಮಿಯಲ್ಲಿ ಆ. 27ರಂದು ನಡೆಯುವ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ಬನ್ನಂಜೆ ರಾಜಾಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅನುಮತಿ ನೀಡಿದೆ.
ಬನ್ನಂಜೆ ರಾಜಾನ ತಾಯಿ ವಿಲಾಸಿನಿ ಶೆಟ್ಟಿಗಾರ್ ಆ. 25ರಂದು ಸಂಜೆ ಕಲ್ಮಾಡಿ ಸಮೀಪದ ಮನೆಯಲ್ಲಿ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾ ನ್ಯಾಯಾಲಯದ ಅನುಮತಿ ಯಂತೆ ಜು.9ರಂದು ಅನಾರೋಗ್ಯ ಪೀಡಿತ ತಾಯಿಯನ್ನು ಕಲ್ಮಾಡಿಯ ಮನೆಯಲ್ಲಿ ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದನು.
ಇದೀಗ ಮೃತ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬನ್ನಂಜೆ ರಾಜ ನಿಗೆ ಅವಕಾಶ ನೀಡುವಂತೆ ಕೋರಿ ವಕೀಲ ಶಾಂತಾರಾಮ್ ಶೆಟ್ಟಿ ರವಿವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ಟಿ.ನಾಯ್ಕಾ ಅವರ ನಿವಾಸದ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಪರಿಶೀಲನೆ ನಡೆಸಿದ ನ್ಯಾಯಾಧೀಶರು ತಾಯಿಯ ಅಂತ್ಯಕ್ರಿಯೆಯಲ್ಲಿ ಬನ್ನಂಜೆ ರಾಜಾನಿಗೆ ಪಾಲ್ಗೊಳ್ಳಲು ಅವಕಾಶ ನೀಡಿ ಆದೇಶ ನೀಡಿದರು. ಈ ಪ್ರತಿಯನ್ನು ಉಡುಪಿ ನಗರ ಠಾಣಾ ಧಿಕಾರಿಗಳ ಮೂಲಕ ಹಿಂಡಲಗಾ ಜೈಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ.
ಅದರಂತೆ ಉಡುಪಿ ನಗರ ಪೊಲೀಸರು ಬಿಗಿ ಭದ್ರತೆಯಲ್ಲಿ ಬನ್ನಂಜೆ ರಾಜಾ ನನ್ನು ಉಡುಪಿಗೆ ಕರೆ ತರುತ್ತಿದ್ದಾರೆ. ಇಂದು ರಾತ್ರಿ ನಗರ ಠಾಣೆಯ ಲಾಕಪ್ ನಲ್ಲಿ ಉಳಿದುಕೊಳ್ಳುವ ಬನ್ನಂಜೆ ರಾಜ ನಾಳೆ (ಆ.27) ಬೆಳಗ್ಗೆ ಕಲ್ಮಾಡಿಯ ಮನೆಗೆ ತೆರಳಲಿದ್ದಾನೆ. ಅಲ್ಲಿಂದ ಮಧ್ಯಾಹ್ನ ಮಲ್ಪೆ ಬೀಚ್ ಬಳಿಯ ಸ್ಮಶಾನದಲ್ಲಿ ನಡೆಯುವ ತಾಯಿಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾನೆ. ನಂತರ ಅದೇ ದಿನ ರಾತ್ರಿ ನಗರ ಠಾಣೆಯ ಲಾಕಪ್‌ನಲ್ಲಿ ಉಳಿಯುವ ಬನ್ನಂಜೆ ರಾಜನನ್ನು ಆ. 28ರ ಬೆಳಗ್ಗೆ ಪೊಲೀಸರು ಬೆಳಗಾವಿ ಜೈಲಿಗೆ ಕರೆದುಕೊಂಡು ಹೋಗಲಿ ದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







